Thursday, 12th December 2024

ಮೊದಲ ಮತದಾನ ಮಾಡಿದ 93 ವರ್ಷದ ವೃದ್ಧ

ಕಂಕೇರ್: ಛತ್ತೀಸ್​ಗಢದ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕೆಲವು ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆ ಸ್ಥಾಪಿಸಿರುವುದು ವಿಶೇಷವಾಗಿದ್ದರೆ, 93 ವರ್ಷದ ವಯೋವೃದ್ಧರೊಬ್ಬರು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಇಂದು ಛತ್ತೀಸ್​ಗಢದ 20 ಕ್ಷೇತ್ರಗಳು ಹಾಗೂ ಮಿಜೋರಾಂನ ಎಲ್ಲ 40 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಇಂದು ಮೊದಲ ಹಂತದಲ್ಲಿ 20 ಕ್ಷೇತ್ರದಲ್ಲಿ ಮತದಾನ ಜರುಗುತ್ತಿದೆ. ಇದರಲ್ಲಿ ನಕ್ಸಲ್​ ಪೀಡಿತ ಬಸ್ತಾರ್​ ವಿಭಾಗದಲ್ಲಿ 12 ಕ್ಷೇತ್ರಗಳು ಸೇರಿದ್ದು, ಪೊಲೀಸರು, ಸಿಆರ್​ಪಿಎಫ್​ ಸೇರಿದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣು ಇರಿಸಿವೆ. ಇದರ ನಡುವೆ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರು ಐಇಡಿ ಸ್ಫೋಟಿಸಿ ದ್ದಾರೆ. ಇದರಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ, ಇನ್ಸ್​ಪೆಕ್ಟರ್​ ಶ್ರೀಕಾಂತ್ ಎಂಬುವರು ಗಾಯಗೊಂಡಿದ್ದಾರೆ.

ಬಸ್ತಾರ್ ವಿಭಾಗದ ಜಗದಲ್‌ಪುರ ಜಿಲ್ಲೆಯ ಚಂದಮೇಟಾ ಗ್ರಾಮದಲ್ಲಿ ಪ್ರಥಮ ಬಾರಿಗೆ ಮತದಾನ ನಡೆಯುತ್ತಿದೆ. ಛತ್ತೀಸ್‌ಗಢ ಮತ್ತು ಒಡಿಶಾದ ಗಡಿ ಪ್ರದೇಶದಲ್ಲಿರುವ ದರ್ಭಾ ಅಭಿವೃದ್ಧಿ ಬ್ಲಾಕ್‌ನ ಈ ಗ್ರಾಮವು ನಕ್ಸಲ್ ಪೀಡಿತ ಪ್ರದೇಶವಾಗಿದೆ.

ಒಂದು ವರ್ಷದ ಹಿಂದೆ ಭದ್ರತಾ ಪಡೆಗಳು ಇಲ್ಲಿನ ನಕ್ಸಲರ ಶಿಬಿರವನ್ನು ತೆರವು ಮಾಡಿದ್ದಾರೆ. ಅಲ್ಲದೇ, ಶಾಲೆಯನ್ನು ಆರಂಭಿಸಿದ್ದಾರೆ. ಈಗ ಶಾಲೆಯೂ ಮತಗಟ್ಟೆಯಾಗಿದೆ. ಗ್ರಾಮದಲ್ಲಿ ಒಟ್ಟು 337 ಮತದಾರರಿದ್ದು, ಮೊದಲ ಬಾರಿಗೆ ಮತಗಟ್ಟೆ ಸ್ಥಾಪಿಸಲಾಗಿದೆ. ಹೀಗಾಗಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಈ ಗ್ರಾಮದ ಜನರು ತಮ್ಮ ಗ್ರಾಮದಲ್ಲಿಯೇ ಮತ ಚಲಾಯಿಸಿದ್ದಾರೆ.