Friday, 22nd November 2024

Omar Abdullah: ಜಮ್ಮು & ಕಾಶ್ಮೀರದಲ್ಲಿ ಎನ್‌ಸಿಗೆ ಬೆಂಬಲ ಸೂಚಿಸಿದ ನಾಲ್ವರು ಸ್ವತಂತ್ರ ಶಾಸಕರು

Omar Abdullah

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ (J&K Assembly Election Result) ಹೊರ ಬಿದ್ದಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ (National Conference) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೀಗ ಸ್ವತಂತ್ರವಾಗಿ ಸ್ಪರ್ಧಿಸಿ ಜಯ ಗಳಿಸಿದ 4 ಶಾಸಕರು ನ್ಯಾಷನಲ್‌ ಕಾನ್ಫರೆನ್ಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಯಾಗಲಿರುವ ಒಮರ್‌ ಅಬ್ದುಲ್ಲಾ(Omar Abdullah) ಮಾಹಿತಿ ನೀಡಿದ್ದಾರೆ. ಈ ಮೂಲಕ ನ್ಯಾಷನಲ್‌ ಕಾನ್ಫರೆನ್ಸ್‌ ಸಂಖ್ಯಾಬಲ 46ಕ್ಕೆ ಏರಿದೆ.

ಎನ್‌ಸಿ ಒಟ್ಟು 42 ಕಡೆ ಗೆದ್ದಿದ್ದರೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಸಿಪಿಐ (ಎಂ) ಕ್ರಮವಾಗಿ 6 ಮತ್ತು 1 ಸ್ಥಾನದಲ್ಲಿ ಜಯಭೇರಿ ಭಾರಿಸಿದೆ. ಈ ಮೂಲಕ 90 ಸೀಟುಗಳ ವಿಧಾನಸಭೆಯಲ್ಲಿ ಮೈತ್ರಿಕೂಟ ಬಹುಮತ ಪಡೆದುಕೊಂಡಿದೆ. ಇದೀಗ ಸ್ವತಂತ್ರ ಅಭ್ಯರ್ಥಿಗಳೂ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಒಟ್ಟು ಸಂಖ್ಯೆ 53ಕ್ಕೆ ಏರಿದಂತಾಗಿದೆ.

ಗುರುವಾರ ನಡೆದ ಸಭೆಯಲ್ಲಿ ಒಮರ್ ಅಬ್ದುಲ್ಲಾ ಅವರನ್ನು ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಘೋಷಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಶಾಸಕರು ಶುಕ್ರವಾರ ಮಧ್ಯಾಹ್ನ ಶ್ರೀನಗರದಲ್ಲಿ ಜೆಕೆಪಿಸಿಸಿ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಅವರ ನೇತೃತ್ವದಲ್ಲಿ ಸಭೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎನ್‌ಸಿ ವಿರುದ್ದ ಕೇಳಿಬಂದ ಆರೋಪ

ಈತನ್ಮಧ್ಯೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ವಕ್ತಾರರು ಮಾತನಾಡಿ, ಚುನಾವಣಾ ಫಲಿತಾಂಶದ ನಂತರ ಎನ್‌ಸಿ ಮತ್ತು ಸಿಪಿಐ (ಎಂ) ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿದೆ. ಎನ್‌ಸಿ ಕಾರ್ಯಕರ್ತರು ಪಿಡಿಪಿ ಮಹಿಳಾ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಶ್ರೀಗುಫ್ವಾರಾ-ಬಿಜ್ಬೆಹರಾದಿಂದ ಗೆಲುವು ಸಾದಿಸಿದ ಎನ್‌ಸಿಯ ಬಶೀರ್ ವೀರಿ ವಿರುದ್ಧ ಈ ಆರೋಪ ಕೇಳಿ ಬಂದಿದೆ.

ಸೂರನ್ಕೋಟೆಯ ಸ್ವತಂತ್ರ ಶಾಸಕ ಚೌಧರಿ ಮೊಹಮ್ಮದ್ ಅಕ್ರಮ್ ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. 90 ಸೀಟುಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 29, ಪಿಡಿಪಿ 3, ಪೀಪಲ್ಸ್‌ ಕಾನ್ಫರೆನ್ಸ್‌ ಮತ್ತು ಆಮ್‌ ಆದ್ಮಿ ಪಾರ್ಟಿ ತಲಾ 1 ಕಡೆ ಜಯಗಳಿಸಿದೆ. ಸ್ವತಂತ್ರ ಅಭ್ಯರ್ಥಿಗಳು 7 ಕಡೆ ಗೆಲುವು ಸಾಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: J&K Assembly Election Result: ಒಮರ್‌ ಅಬ್ದುಲ್ಲಾ ಕಾಶ್ಮೀರದ ಮುಂದಿನ ಸಿಎಂ

ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ(Farooq Abdullah) ಅವರು ತಮ್ಮ ಪುತ್ರ ಒಮರ್‌ ಅಬ್ದುಲ್ಲಾಅವರನ್ನು ಕಣಿವೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದರು. ಈ ಮೂಲಕ ಓಮರ್‌ ಅಬ್ದುಲ್ಲಾ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವ ಬಗ್ಗೆ ನಿರ್ಣಯವನ್ನು ಅಂಗೀಕರಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಒಮರ್ ಅಬ್ದುಲ್ಲಾ ಈಗಾಗಲೇ ತಿಳಿಸಿದ್ದಾರೆ.