ನವದೆಹಲಿ: ವೈದ್ಯರು ಮಾತ್ರವಲ್ಲದೆ, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮುಂತಾದವರನ್ನೆಲ್ಲ ಕರೋನಾ ವಾರಿಯರ್ ಎಂದು ಪರಿಗಣಿಸಲಾಗಿದ್ದು, ಅವರು ಕೋವಿಡ್ನಿಂದಾಗಿ ಮೃತಪಟ್ಟರೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಪರಿಹಾರವಾಗಿ ಲಭಿಸಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ವೈದ್ಯರೊಬ್ಬರು ಕರೋನಾಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರಿಹಾರ ಮೊತ್ತ ಬರೋಬ್ಬರಿ 1 ಕೋಟಿ ರೂಪಾಯಿ ನೀಡಿದ್ದಾರೆ. ದೆಹಲಿಯ ಡಾ.ಅನಾಸ್ ಎಂಬ 26 ವರ್ಷದ ವ್ಯಕ್ತಿ ಕರೊನಾ ಸೋಂಕಿತರಾಗಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು.
ಡಾ. ಅನಾಸ್ ಅವರ ಮನೆಗೆ ಭೇಟಿ ನೀಡಿ ಅವರ ತಂದೆಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒಂದು ಕೋಟಿ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಿದ್ದಾರೆ. ‘ನನ್ನ ಪುತ್ರ ಕರ್ತವ್ಯದ ಮೇಲಿದ್ದ, ನನ್ನ ಇತರ ಮಕ್ಕಳೂ ಅವನಂತೆಯೇ ದೇಶಕ್ಕಾಗಿ ಸೇವೆ ಮಾಡಲಿ ಎಂದು ಬಯಸುತ್ತೇನೆ’ ಎಂಬುದಾಗಿ ಅನಾಸ್ ಅವರ ತಂದೆ ಅನಿಸಿಕೆ ಹಂಚಿಕೊಂಡಿದ್ದಾರೆ.