Tuesday, 17th December 2024

One Nation One Election: ಇಂದು ಮಂಡನೆಯಾಗುತ್ತಾ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ?

One Nation One Election

ನವದೆಹಲಿ: ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಅನುಮತಿ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯಾದ ‘ಒಂದು ರಾಷ್ಟ್ರ ಒಂದು ಚುನಾವಣೆ’ (One Nation One Election) ಮಸೂದೆ ಮಂಗಳವಾರ ಬೆಳಗ್ಗೆ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಅವರು ʼಒಂದು ರಾಷ್ಟ್ರ, ಒಂದು ಚುನಾವಣೆʼ ಮಸೂದೆಯನ್ನು ಮಂಡಿಸಲಿದ್ದಾರೆ. ಮಸೂದೆಯ ಮಂಡನೆಯ ಬಳಿಕ ಅವರು ಅದನ್ನು ಜಂಟಿ ಸಂಸದೀಯ ಸಮಿತಿಗೆ (JPC) ವಹಿಸಲು ಸ್ಪೀಕರ್ ಓಂ ಬಿರ್ಲಾಗೆ ಮನವಿ ಮಾಡಲಿದ್ದಾರೆ.

ಮಸೂದೆ ಏನು ಹೇಳುತ್ತದೆ?

ಪ್ರಸ್ತಾವಿತ ʼಒಂದು ದೇಶ, ಒಂದು ಚುನಾವಣೆʼ ವಿಧೇಯಕವು ಸಂವಿಧಾನದ 129ನೇ ತಿದ್ದುಪಡಿ ಮಸೂದೆಯಾಗಿದ್ದು, ಇದು ದೇಶದಲ್ಲಿ ಏಕಕಾಲಕ್ಕೆ ಎಲ್ಲ ಸಂಸ್ಥೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸುವ ಮಹತ್ತರ ಉದ್ದೇಶ ಹೊಂದಿದೆ. ಮಸೂದೆಯ ಪ್ರಕಾರ, ಲೋಕಸಭೆ ಅಥವಾ ಯಾವುದೇ ರಾಜ್ಯ ವಿಧಾನಸಭೆಯನ್ನು ಅದರ ಪೂರ್ಣ ಅವಧಿ ಮುಗಿಯುವ ಮೊದಲು ವಿಸರ್ಜಿಸಿದರೆ, ಅದರ ಉಳಿದ ಭಾಗವನ್ನು ಪೂರ್ಣಗೊಳಿಸಲು ಆ ಶಾಸಕಾಂಗಕ್ಕೆ ಮಾತ್ರ ಮಧ್ಯಂತರ ಚುನಾವಣೆಗಳನ್ನು ನಡೆಸಲಾಗುತ್ತದೆ.

ವಿಧೇಯಕಗಳ ಅಂಗೀಕಾರದ ಬಳಿಕ, ಹೊಸ ವಿಧಿಯ (82A) ನಿಯಮಗಳು ಜಾರಿಗೆ ಬರುತ್ತವೆ. ಇದರ ಪ್ರಕಾರ, ಸಾರ್ವತ್ರಿಕ ಚುನಾವಣೆ ನಡೆದು ಲೋಕಸಭೆಯ ಮೊದಲ ಅಧಿವೇಶನದಲ್ಲಿ ದೇಶದ ರಾಷ್ಟ್ರಪತಿ ಒಂದು ಅಧಿಸೂಚನೆಯನ್ನು ಹೊರಡಿಸುತ್ತಾರೆ. ಅದರಲ್ಲಿ ಸಂಸತ್​ ಅನ್ನು ಚುನಾಯಿಸಿದ ದಿನಾಂಕವನ್ನು ಘೋಷಿಸಲಾಗುತ್ತದೆ.

ಅಂದರೆ ರಾಷ್ಟ್ರಪತಿಗಳು ನಿಗದಿ ಮಾಡಿದ ದಿನಾಂಕದಿಂದ ಹಿಡಿದು ಮುಂದಿನ ಐದು ವರ್ಷ ಸಂಸತ್ತಿನ ಅಧಿಕಾರದ ಅವಧಿಯಾಗಿರುತ್ತದೆ. ಇದರ ಜೊತೆಗೆ ರಾಜ್ಯಗಳ ವಿಧಾನಸಭೆಗಳ ಅಧಿಕಾರಾವಧಿಯು ಸಂಸತ್​​ ಅವಧಿಯ ದಿನಾಂಕದಂದೇ ಮುಗಿಯಲಿದೆ. ಬಳಿಕ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಒಮ್ಮೆಲೇ ಸಾರ್ವತ್ರಿಕ ಚುನಾವಣೆಗಳು ಜರುಗಲಿವೆ.

ಲೋಕಸಭೆ ಅಥವಾ ವಿಧಾನಸಭೆಗಳ ಪೂರ್ಣಾವಧಿಗಿಂತ ಮುಂಚೆಯೇ ಸರ್ಕಾರ ವಿಸರ್ಜನೆಯಾದರೆ, ಈಗಿರುವಂತೆ ಮಧ್ಯಂತರ ಚುನಾವಣೆ ನಡೆಯತ್ತವೆ. ಆದರೆ ಈ ಹಿಂದಿನಂತೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾದ ದಿನಾಂಕದಿಂದ ಐದು ವರ್ಷಗಳು ಇರುವುದಿಲ್ಲ. ಬದಲಾಗಿ, ಲೋಕಸಭೆ ಅಥವಾ ರಾಜ್ಯಗಳ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆದ ದಿನಾಂಕಕ್ಕೆ ಸಮಾನವಾಗಿ ಅಂದಿಗೆ ಅಧಿಕಾರಾವಧಿ ಮುಗಿಯುತ್ತದೆ.

ಪ್ರತಿಪಕ್ಷಗಳಿಂದ ವಿರೋಧ

ಒಂದು ದೇಶ ಒಂದು ಚುನಾವಣೆಯ ಕಾನೂನನ್ನು ಪ್ರತಿಪಕ್ಷಗಳು ಬಲವಾಗಿ ವಿರೋಧಿಸುತ್ತಿವೆ. ಒಂದು ವೇಳೆ ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಪತನವಾದರೆ ಅಥವಾ ಬಹುಮತ ಕಳೆದುಕೊಂಡರೆ ಉಳಿದ 4.5 ವರ್ಷಗಳ ಕಾಲ ರಾಜ್ಯ ಸರ್ಕಾರವಿಲ್ಲದೆಯೇ ಇರಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಪ್ರಸ್ತಾವಿತ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಮಸೂದೆಯು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಸೂದೆಯನ್ನು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಾದ ನಂತರ ಅದನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : One Nation One Election: ʼಒಂದು ರಾಷ್ಟ್ರ ಒಂದು ಚುನಾವಣೆʼ ಪ್ರಸ್ತಾವನೆಯ ಮುಂದಿದೆ ಹಲವು ಸವಾಲು!