Tuesday, 17th December 2024

One Nation One Election: ಕೊನೆಗೂ ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ; ವಿಪಕ್ಷಗಳಿಂದ ಭಾರೀ ವಿರೋಧ

One Nation One Election

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ‘ಒಂದು ರಾಷ್ಟ್ರ ಒಂದು ಚುನಾವಣೆ’ (One Nation One Election) ಮಸೂದೆ ಮಂಗಳವಾರ ಮಂಡನೆಯಾಗಿದೆ. ಈ ಪ್ರಸ್ತಾವನೆಯು ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಗುರಿಯನ್ನು ಹೊಂದಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಅವರು ʼಒಂದು ರಾಷ್ಟ್ರ, ಒಂದು ಚುನಾವಣೆʼ ಮಸೂದೆಯನ್ನು ಮಂಡಿಸಿದರು. ಮಸೂದೆ ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ.

ಈ ಬಗ್ಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸಂಸದ ಮನೀಶ್ ತಿವಾರಿ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ತೃಣಮೂಲದ ಕಲ್ಯಾಣ್ ಬ್ಯಾನರ್ಜಿ, ಡಿಎಂಕೆಯ ಟಿಆರ್ ಬಾಲು ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ (ಶರದ್ ಪವಾರ್ ಬಣ) ಸೇರಿದಂತೆ ಹಲವು ಸಂಸದರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮನೀಶ್ ತಿವಾರಿ ಮಾತನಾಡಿ, ನಾವು ಈ ಮಸೂದೆಯನ್ನು ವಿರೋಧಿಸುತ್ತೇವೆ. ಇದು ಸಂವಿಧಾನದ ಮೂಲ ರಚನೆಯ ಮೇಲಿನ ಆಕ್ರಮಣ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಆಡಳಿತವನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಆರೋಪಿಸಿದರು. ಮಸೂದೆಯು ಭಾರತದ ವೈವಿಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆಂಧ್ರಪ್ರದೇಶದ ಆಡಳಿತಾರೂಢ ಟಿಡಿಪಿ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ – ಎರಡೂ ಮಸೂದೆಯನ್ನು ಬೆಂಬಲಿಸಿದ್ದಾರೆ.

ಮಸೂದೆ ಏನು ಹೇಳುತ್ತದೆ?

ಪ್ರಸ್ತಾವಿತ ʼಒಂದು ದೇಶ, ಒಂದು ಚುನಾವಣೆʼ ವಿಧೇಯಕವು ಸಂವಿಧಾನದ 129ನೇ ತಿದ್ದುಪಡಿ ಮಸೂದೆಯಾಗಿದ್ದು, ಇದು ದೇಶದಲ್ಲಿ ಏಕಕಾಲಕ್ಕೆ ಎಲ್ಲ ಸಂಸ್ಥೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸುವ ಮಹತ್ತರ ಉದ್ದೇಶ ಹೊಂದಿದೆ. ಮಸೂದೆಯ ಪ್ರಕಾರ, ಲೋಕಸಭೆ ಅಥವಾ ಯಾವುದೇ ರಾಜ್ಯ ವಿಧಾನಸಭೆಯನ್ನು ಅದರ ಪೂರ್ಣ ಅವಧಿ ಮುಗಿಯುವ ಮೊದಲು ವಿಸರ್ಜಿಸಿದರೆ, ಅದರ ಉಳಿದ ಭಾಗವನ್ನು ಪೂರ್ಣಗೊಳಿಸಲು ಆ ಶಾಸಕಾಂಗಕ್ಕೆ ಮಾತ್ರ ಮಧ್ಯಂತರ ಚುನಾವಣೆಗಳನ್ನು ನಡೆಸಲಾಗುತ್ತದೆ.

ವಿಧೇಯಕಗಳ ಅಂಗೀಕಾರದ ಬಳಿಕ, ಹೊಸ ವಿಧಿಯ (82A) ನಿಯಮಗಳು ಜಾರಿಗೆ ಬರುತ್ತವೆ. ಇದರ ಪ್ರಕಾರ, ಸಾರ್ವತ್ರಿಕ ಚುನಾವಣೆ ನಡೆದು ಲೋಕಸಭೆಯ ಮೊದಲ ಅಧಿವೇಶನದಲ್ಲಿ ದೇಶದ ರಾಷ್ಟ್ರಪತಿ ಒಂದು ಅಧಿಸೂಚನೆಯನ್ನು ಹೊರಡಿಸುತ್ತಾರೆ. ಅದರಲ್ಲಿ ಸಂಸತ್​ ಅನ್ನು ಚುನಾಯಿಸಿದ ದಿನಾಂಕವನ್ನು ಘೋಷಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ : Priyanka Gandhi: ಅಮ್ಮ, ಅಣ್ಣನ ಜತೆ ಸಂಸತ್‌ಗೆ ಪ್ರಿಯಾಂಕಾ ಗಾಂಧಿ ಎಂಟ್ರಿ! ಸಂಸದೆಯಾಗಿ ಪ್ರಮಾಣ ವಚನ ಸ್ವೀಕಾರ