Sunday, 15th December 2024

ವೇಗ ಪಡೆದುಕೊಂಡ ಆಪರೇಶನ್ ಕಾವೇರಿ: 10ನೇ ಬ್ಯಾಚ್ ಸ್ಥಳಾಂತರ

ನವದೆಹಲಿ: ಯುದ್ಧಭೂಮಿ ಸುಡಾನ್​​ನಿಂದ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಪ್ರಾರಂಭ ಮಾಡಿರುವ ಆಪರೇಶನ್ ಕಾವೇರಿ ವೇಗ ಪಡೆದುಕೊಂಡಿದೆ.

135 ಭಾರತೀಯರನ್ನು ಒಳಗೊಂಡ 10ನೇ ಬ್ಯಾಚ್,​ ಪೋರ್ಟ್​ ಸುಡಾನ್​ನಿಂದ ಹೊರಟಿದ್ದು, ಶೀಘ್ರದಲ್ಲಿಯೇ ಸೌದಿ ಅರೇಬಿ ಯಾದ ಜೆಡ್ಡಾದಲ್ಲಿ ಲ್ಯಾಂಡ್ ಆಗಲಿದೆ. ಐಎಎಫ್​ ಸಿ 130ಜೆ ವಿಮಾನದಲ್ಲಿ ಪೋರ್ಟ್​ ಸುಡಾನ್​​ನಿಂದ ಹೊರಟಿದ್ದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್​ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸುಡಾನ್​ನಲ್ಲಿ ಏಪ್ರಿಲ್​ 15ರಿಂದ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಇವರಿಬ್ಬರ ಯುದ್ಧದ ಪರಿಣಾಮ ಇದುವರೆಗೆ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಸುಡಾನ್​ನಲ್ಲಿ 3000ಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಅವರನ್ನೆಲ್ಲ ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬರುವ ಹೊಣೆ ನಮ್ಮದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದಕ್ಕಾಗಿಯೇ ಆಪರೇಶನ್​ ಕಾವೇರಿಯನ್ನು ಅದು ಪ್ರಾರಂಭಿಸಿದೆ.

ಪೋರ್ಟ್​ ಸುಡಾನ್​ನಿಂದ ಭಾರತೀಯರನ್ನು ಜೆಡ್ಡಾಕ್ಕೆ ಕರೆದೊಯ್ಯಲು ಐಎನ್​ಎಸ್ ಸುಮೇಧಾ, ಐಎನ್​ಎಸ್ ತೇಜ್, ಐಎನ್​ಎಸ್​ ತರ್ಕಾಶ್​​ ನೌಕೆಗಳು ಮತ್ತು ಐಎಎಫ್​ ಸಿ 130ಜೆ ವಿಮಾನಗಳನ್ನು ನಿಯೋಜಿಸಲಾಗಿದೆ. 9ನೇ ಬ್ಯಾಚ್​​ನಲ್ಲಿ ಐಎನ್​ಎಸ್​ ತರ್ಕಾಶ್​ ಹಡಗಿನಲ್ಲಿ 326 ಭಾರತೀಯರನ್ನು ಮತ್ತು ಐಎಎಫ್​ ಸಿ 130 ಜೆ ವಿಮಾನದಲ್ಲಿ 135 ಜನರನ್ನು ಜೆಡ್ಡಾಕ್ಕೆ ಕರೆತರಲಾಗಿದೆ. 8ನೇ ಬ್ಯಾಚ್​​ನಲ್ಲಿ 121 ಭಾರತೀಯರು ಸುಡಾನ್​​ನಿಂದ ಹೊರಟಿದ್ದಾರೆ.