Friday, 13th December 2024

ಹಿಟ್‌ & ರನ್‌ ಪ್ರಕರಣ: ನೂತನ ಕಾನೂನು ವಿರೋಧಿಸಿ ಮುಷ್ಕರ

ವದೆಹಲಿ: ಹಿಟ್‌ & ರನ್‌ ಪ್ರಕರಣಕ್ಕೆ ಸಂಬಂಧಿಸಿದ ನೂತನ ಕಾನೂನು ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಲಾರಿ ಚಾಲಕರು ಮಂಗಳವಾರ ಮುಷ್ಕರ ನಡೆಸುತ್ತಿದ್ದಾರೆ.

ಪ್ರತಿಭಟನೆ ತೀವ್ರಗೊಂಡರೆ ಇಂಧನ ಸರಬರಾಜು ಮೇಲೆ ಪರಿಣಾಮ ಬೀರಬಹುದೆಂಬ ಭೀತಿಯಿಂದಾಗಿ ಮಹಾರಾಷ್ಟ್ರ, ಛತ್ತೀಸ್‌ ಗಢ, ಮಧ್ಯಪ್ರದೇಶ ದಲ್ಲಿ ನೂರಾರು ಜನರು ಪೆಟ್ರೋಲ್‌ ಬಂಕ್‌ ಬಳಿ ಜಮಾಯಿಸಿರುವುದಾಗಿ ವರದಿ ತಿಳಿಸಿದೆ.

ಬ್ರಿಟಿಷ್‌ ಕಾಲದ ಇಂಡಿಯನ್‌ ಪೀನಲ್‌ ಕೋಡ್‌ ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ನೂತನ ಕಾಯ್ದೆಯ ಪ್ರಕಾರ, ಹಿಟ್‌ ಆಂಡ್‌ ರನ್‌ ಕೇಸ್‌ ನಲ್ಲಿ ಆರೋಪಿ ಅಪಘಾತದ ಬಗ್ಗೆ ಮಾಹಿತಿ ನೀಡದೇ ಘಟನಾ ಸ್ಥಳದಿಂದ ಪರಾರಿಯಾದರೆ ಹತ್ತು ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ನೂತನ ಕಾಯ್ದೆಯನ್ನು ವಿರೋಧಿಸಿ ಮಹಾರಾಷ್ಟ್ರದ ವಿವಿಧೆಡೆ ಲಾರಿ ಚಾಲಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲಾರಿ ಚಾಲಕರ ಪ್ರತಿಭಟನೆಯಿಂದಾಗಿ ಹಲವೆಡೆ ಇಂಧನ ಕೊರತೆ ಉಂಟಾಗಿದೆ ಎಂದು ವರದಿ ವಿವರಿಸಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಯಾಂದರ್‌ ಪ್ರದೇಶದಲ್ಲಿ ಮುಂಬೈ-ಅಹಮದಾಬಾದ್‌ ಹೆದ್ದಾರಿಯನ್ನು ತಡೆದು ಮುಷ್ಕರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಹಲವು ಪೊಲೀಸರು ಗಾಯಗೊಂಡಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

ಸೋಲಾಪುರ್‌, ಕೊಲ್ಹಾಪುರ್‌, ನಾಗ್ಪುರ್‌ ಮತ್ತು ಗೋಂಡಿಯಾ ಜಿಲ್ಲೆಗಳಲ್ಲಿ ರಸ್ತೆಗಳನ್ನು ತಡೆದು ಲಾರಿ ಚಾಲಕರು ಪ್ರತಿಭಟನೆ ನಡೆಸಿದ್ದರು.