Thursday, 12th December 2024

ಓವೈಸಿ ಮನೆ ಧ್ವಂಸ: ಹಿಂದೂ ಸಂಘಟನೆಯ ಐವರ ಬಂಧನ

ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ, ಹಿಂದೂ ಸಂಘಟನೆಗೆ ಸೇರಿದವರು ಎನ್ನಲಾದ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನವೆದಹಲಿಯ ಅಶೋಕ ರಸ್ತೆಯಲ್ಲಿರುವ ಸಂಸದ ಅಸಾದುದ್ದೀನ್ ಓವೈಸಿಯವರಿಗೆ ಸೇರಿದ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯ ವಸ್ತುಗಳನ್ನು ಧ್ವಂಸಗೊಳಿ ಸಿದ್ದರು. ಈ ಬಗ್ಗೆ ಓವೈಸಿ, ದುಷ್ಕರ್ಮಿಗಳ ತಂಡವು ಕೋಮು ಘೋಷಣೆಗಳನ್ನು ಕೂಗುತ್ತಿದ್ದು, ತಮಗೆ ಜೀವ ಬೆದರಿಕೆ ಹಾಕಿದೆ ಎಂದು ಹೇಳಿದ್ದಾರೆ.

ಸಂಸದರ ಮನೆಯೇ ಸುರಕ್ಷಿತವಾಗಿಲ್ಲದಿದ್ದರೆ, ಅಮಿತ್ ಶಾ ಇದರಿಂದ ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದಾರೆ? ಎಂದು ಓವೈಸಿ ತಮ್ಮ ಟ್ವಿಟರ್‌ನಲ್ಲಿ ಕೇಂದ್ರ ಗೃಹ ಸಚಿವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಯಾದವ್ ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.