Friday, 22nd November 2024

ಲಿಕ್ವಿಡ್‌​ ಮೆಡಿಕಲ್ ಆಕ್ಸಿಜನ್​ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ: ಪ್ರಧಾನಿ ಮೋದಿ

ನವದೆಹಲಿ : ದೇಶದಲ್ಲಿ ಕರೋನಾ ರೋಗಿಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಲಿಕ್ವಿಡ್‌​ ಮೆಡಿಕಲ್ ಆಕ್ಸಿಜನ್​ ಉತ್ಪಾದನೆ 10 ಪಟ್ಟು ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಪ್ರಧಾನಿ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಮಾತನಾಡಿದರು. ಆಕ್ಸಿಜನ್ ಪೂರೈಕೆಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿ, ಸಾಮಾನ್ಯವಾಗಿ 900 ಮೆಟ್ರಿಕ್ ಟನ್​ಗಳಷ್ಟು ಒಂದು ದಿನಕ್ಕೆ ಎಲ್​ಎಂಒ ಉತ್ಪಾದನೆ ನಡೆಯುತ್ತಿತ್ತು. ಇಂದು ದಿನಕ್ಕೆ 9,500 ಮೆಟ್ರಿಕ್ ಟನ್​​ಗಳ ಉತ್ಪಾದನೆಯಾಗುತ್ತಿದೆ’ ಎಂದರು.

ಹಿಂದೆ ಆಸ್ಪತ್ರೆಗಳಿಂದ ಆಕ್ಸಿಜನ್ ಕೊರತೆ ಕುರಿತು ಅನೇಕ ಎಸ್​ಒಎಸ್​ ಬರುತ್ತಿದ್ದವು. ಸಾಮಾಜಿಕ ಮಾಧ್ಯಮದಲ್ಲೂ ನಾಗರೀಕರ ಆಕ್ಸಿಜನ್ ಬೇಡಿಕೆಗಳು ಕಂಡುಬಂದವು. ಈ ಸನ್ನಿವೇಶದಲ್ಲಿ ಖಾಸಗಿ ಘಟಕಗಳಲ್ಲಿರುವ ಸ್ಟಾಕ್​ ಸೇರಿದಂತೆ ಎಲ್ಲಾ ಲಿಖ್ವಿಡ್ ಆಕ್ಸಿಜನ್‌ಅನ್ನು ವೈದ್ಯಕೀಯ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ಸರ್ಕಾರ ನಿರ್ದೇಶಿಸಿತು. ಜೊತೆಗೆ ವಿದೇಶದಿಂದ ತುರ್ತು ವೈದ್ಯಕೀಯ ಸಹಾಯ ಹರಿದುಬಂತು. ರಾಜ್ಯಗಳ ಆಕ್ಸಿಜನ್ ಬೇಡಿಕೆ ಈಡೇರಿಸಲು ವಿಶೇಷ ಆಕ್ಸಿಜನ್ ಎಕ್ಸ್​​ಪ್ರೆಸ್​ ರೈಲುಗಳನ್ನು ಆರಂಭಿಸಲಾಯಿತು ಎಂದರು.

ಕರೊನಾ ವಿರುದ್ಧದ ಹೋರಾಟದಲ್ಲಿ ಕರೊನಾ ವಾರಿಯರ್​ಗಳ ಮಹತ್ವಪೂರ್ಣ ಸೇವೆ ಎಲ್ಲರೂ ಹೆಮ್ಮೆ ಪಡುವಂಥದ್ದು. ಇಂದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಏಳು ವರ್ಷಗಳನ್ನು ಪೂರೈಸಿರುವುದನ್ನು ಕೇಳುಗರಿಗೆ ನೆನಪಿಸಿದ ಮೋದಿ, ತಮ್ಮ ಸರ್ಕಾರದ ಧ್ಯೇಯವಾದ ‘ಸಬ್​ಕಾ ಸಾಥ್, ಸಬ್​ಕಾ ವಿಕಾಸ್​, ಸಬ್​ಕಾ ವಿಶ್ವಾಸ್​’ ಎಂಬಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.