Friday, 25th October 2024

ಸಪ್ತಪದಿ ತುಳಿದ ‘ಓಯೊ’ದ ಸಂಸ್ಥಾಪಕ ರಿತೇಶ್ ಅಗರವಾಲ್

ವದೆಹಲಿ: ಹಾಸ್ಪಿಟಾಲಿಟಿ ಕ್ಷೇತ್ರದ ಜನಪ್ರಿಯ ಸ್ಟಾರ್ಟ್‌ಅಪ್ ಕಂಪನಿ ‘ಓಯೊ’ದ ಸಂಸ್ಥಾಪಕ ಹಾಗೂ ಸಿಇಒ ರಿತೇಶ್ ಅಗರವಾಲ್ ಸಪ್ತಪದಿ ತುಳಿದಿದ್ದಾರೆ.

ಅವರು ದೆಹಲಿಯ ಗೀತಾಂಶ ಸೂದ್ ಅವರನ್ನು ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ಮಾಡಿ ಕೊಂಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಆರತಕ್ಷತೆ ನಡೆಯಿತು.

ರಿತೇಶ್ ದಂಪತಿ ಆರತಕ್ಷತೆಗೆ ಜಪಾನ್‌ನ ಜಾಗತಿಕ ಹೂಡಿಕೆ ಕಂಪನಿಯಾದ ‘ಸಾಫ್ಟ್‌ಬ್ಯಾಂಕ್‌’ನ ಸಿಇಒ ಮಸಾ ಯೋಶಿ ಸನ್ ಆಗಮಿಸಿದ್ದು ವೀಶೇಷ ವಾಗಿತ್ತು.

ಈ ವೇಳೆ ರಿತೇಶ್ ದಂಪತಿ ಮಸಾಯೋಶಿ ಸನ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹಾಗೂ ಅನೇಕ ಸ್ಟಾರ್ಟ್‌ ಕಂಪನಿಳ ಸ್ಥಾಪಕರು ರಿತೇಶ್ ಆರತಕ್ಷತೆಗೆ ಬಂದು ಹಾರೈಸಿದ್ದಾರೆ.

ವಿಶೇಷವೆಂದರೆ ಮಸಾಯೋಶಿ ಸನ್ ಅವರು ರಿತೇಶ್ ಮದುವೆಯಲ್ಲಿ ಭಾರತದ ಪ್ರಮುಖ ಸ್ಟಾರ್ಟ್‌ಅಪ್ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮಾರವಾಡಿ ಕುಟುಂಬದ ಹಿನ್ನೆಲೆ ಹೊಂದಿರುವ ಒಡಿಶಾದ ರಿತೇಶ್ ಅಗರವಾಲ್, 2013 ರಲ್ಲಿ ಓಯೊ ಕಂಪನಿ ಸ್ಥಾಪಿಸಿದ್ದಾರೆ. ‘ಓಯೊ ಹೋಟೆಲ್ ಮತ್ತು ರೂಮ್ಸ್’ ಹೆಸರಿನಲ್ಲಿ ಇದು ವ್ಯವಹಾರ ಮಾಡುತ್ತಿದ್ದು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಭಾರತವೂ ಸೇರಿದಂತೆ, ಅಮೆರಿಕ, ನೇಪಾಳ, ಯುಎಇ, ಚೀನಾ, ಮಲೇಷಿಯಾ, ಇಂಡೋನೇಷಿಯಾವು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೇವೆ ನೀಡುತ್ತಿದೆ.