Friday, 22nd November 2024

Pandit Deendayal Upadhyaya Birthday: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಪಂಡಿತ್ ದೀನದಯಾಳ್ ಉಪಾಧ್ಯಾಯರ ಬದುಕು ಕುತೂಹಲಕರ

Pandit Deendayal Upadhyaya

ಶ್ರೇಷ್ಠ ತತ್ತ್ವಜ್ಞಾನಿ, ಸಂಘಟಕರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ (Pandit Deendayal Upadhyaya ) ಅವರು ಬಿಜೆಪಿಯ (BJP) ಸೈದ್ಧಾಂತಿಕ ಮಾರ್ಗದರ್ಶಕರು ಮತ್ತು ನೈತಿಕ ಸ್ಫೂರ್ತಿಯ ಮೂಲ. 1953ರಿಂದ 1968ರವರೆಗೆ ಭಾರತೀಯ ಜನಸಂಘದ (Bharatiya Jana Sangh) ನಾಯಕರಾಗಿದ್ದ ಅವರು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದರು.

ಮಹಾನ್ ಮಾನವತಾವಾದಿಯಾಗಿದ್ದ ಉಪಾಧ್ಯಾಯ ಅವರು ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳೆರಡರ ವಿರೋಧಿಯಾಗಿದ್ದರು. ಅವರ ಸಮಗ್ರ ಮಾನವತಾವಾದದ ಚಿಂತನೆಯು ಸೃಷ್ಟಿಯ ನಿಯಮಗಳು ಮತ್ತು ಮಾನವ ಜನಾಂಗದ ಸಾರ್ವತ್ರಿಕ ಅಗತ್ಯಗಳಿಗೆ ಅನುಗುಣವಾಗಿ ರಾಜಕೀಯ ಚಟುವಟಿಕೆ ಮತ್ತು ರಾಜ್ಯಕಾರ್ಯಕ್ಕೆ ಸಮಗ್ರ ಪರ್ಯಾಯ ದೃಷ್ಟಿಕೋನವನ್ನು ನೀಡುತ್ತದೆ.

ಜನನ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು 1916ರ ಸೆಪ್ಟೆಂಬರ್ 25ರಂದು ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಭಾನ್ ಗ್ರಾಮದ ಬ್ರಿಜ್ ಎಂಬ ಪ್ರದೇಶದಲ್ಲಿ ಜನಿಸಿದರು.

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಾತಕವನ್ನು ನೋಡಿದ್ದ ಜ್ಯೋತಿಷಿಯೊಬ್ಬರು ಈ ಹುಡುಗ ಮುಂದೆ ಮಹಾನ್ ವಿದ್ವಾಂಸ, ಚಿಂತಕ, ನಿಸ್ವಾರ್ಥ ಕೆಲಸಗಾರ ಮತ್ತು ಪ್ರಮುಖ ರಾಜಕಾರಣಿಯಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ.

Pandit Deendayal Upadhyaya

ಶಿಕ್ಷಣ

ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು 1934 ರಲ್ಲಿ ಅನಾರೋಗ್ಯದಿಂದಾಗಿ ತಮ್ಮ ಸಹೋದರನನ್ನು ಕಳೆದುಕೊಂಡರು. ಬಳಿಕ ಸಿಕಾರ್‌ಗೆ ತೆರಳಿದ ಅವರು ಅಲ್ಲಿ ಪ್ರೌಢಶಾಲೆಗೆ ಸೇರಿದರು. ಸಿಕಾರ್‌‌ನ ಮಹಾರಾಜ ಅವರು ಪಂಡಿತ್ ಉಪಾಧ್ಯಾಯ ಅವರಿಗೆ ಚಿನ್ನದ ಪದಕದೊಂದಿಗೆ ಪುಸ್ತಕಗಳಿಗೆ 250 ರೂ. ಮತ್ತು ಮಾಸಿಕ 10 ರೂ. ಕೊಡುಗೆಯಾಗಿ ನೀಡಿದರು. ಇದು ಅವರ ಮುಂದಿನ ಶಿಕ್ಷಣಕ್ಕೂ ಸಹಾಯವಾಯಿತು.

ಪಂಡಿತ್ ಉಪಾಧ್ಯಾಯ ಅವರು ಪಿಲಾನಿಯಲ್ಲಿ ತಮ್ಮ ಇಂಟರ್‌ಮೀಡಿಯೇಟ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಂದ ತೇರ್ಗಡೆಯಾದರು. ಬಳಿಕ ಬಿ.ಎ. ಪದವಿಗಾಗಿ ಸನಾತನ ಧರ್ಮ ಕಾಲೇಜಿಗೆ ಸೇರಿದರು. ಅವರ ಮಿತ್ರರಾದ ಬಲವಂತ ಮಹಾಶಬ್ದೆ ಅವರು ಪ್ರೋತ್ಸಾಹದಿಂದ 1937ರಲ್ಲಿ ಆರ್‌ಎಸ್‌ಎಸ್‌ಗೆ ಸೇರಿದರು. ಬಳಿಕ ಅವರು ಬಿ.ಎ. ಪದವಿ ಗಳಿಸಿದರು.

ಎಂಎ ಪರೀಕ್ಷೆ ಬರೆಯಲಾಗಲಿಲ್ಲ

ಆರ್ ಎಸ್ ಎಸ್ ಸೇರಿದ ಉಪಾಧಯ ಅವರಿಗೆ ನಾನಾಜಿ ದೇಶಮುಖ ಮತ್ತು ಭಾವು ಜುಗಾಡೆ ಅವರು ಜೊತೆಯಾದರು. ಇದೇ ಸಂದರ್ಭದಲ್ಲಿ ದಯಾಳ್ ಅವರ ಸೋದರ ಸಂಬಂಧಿ ರಮಾ ದೇವಿ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟರು. ಇದರಿಂದ ದೀನದಯಾಳ್‌ ಅವರು ತುಂಬಾ ಖಿನ್ನತೆಗೆ ಒಳಗಾದರು. ಇದರಿಂದ ಅವರು ಎಂ.ಎ. ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಸಿಕರ್ ಮಹಾರಾಜ್ ಅವರಿಂದ ದೊರೆಯುತ್ತಿದ್ದ ಸ್ಕಾಲರ್‌ಶಿಪ್‌ ಅನ್ನು ನಿಲ್ಲಿಸಲಾಯಿತು.

ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಟೋಪಿ, ಧೋತಿ, ಕುರ್ತಾ ಧರಿಸಿಕೊಂಡು ಹೋದ ಅವರನ್ನು ನೋಡಿ ಇತರ ಅಭ್ಯರ್ಥಿಗಳು ತಮಾಷೆ ಮಾಡಿದರು. ಯಾಕೆಂದರೆ ಇತರ ಅಭ್ಯರ್ಥಿಗಳು ಪಾಶ್ಚಿಮಾತ್ಯ ಸೂಟ್‌ಗಳನ್ನು ಧರಿಸಿ ಬಂದಿದ್ದರು. ಎಲ್ಲರೂ ಉಪಾಧ್ಯಾಯ ಅವರನ್ನು “ಪಂಡಿತ್ಜಿ” ಎಂದು ಗೇಲಿ ಮಾಡಿದರು.

Pandit Deendayal Upadhyaya

ಆರ್‌ಎಸ್‌ಎಸ್‌ನಲ್ಲಿ ವಿವಿಧ ಸ್ಥಾನಮಾನ

ಈ ಪರೀಕ್ಷೆಯಲ್ಲಿ ಅಗ್ರ ಸ್ಥಾನದಲ್ಲಿ ತೇರ್ಗಡೆಯಾದ ಅವರು ಬಳಿಕ ಬಿ.ಟಿ. ಅನ್ನು ಮುಂದುವರಿಸಲು ಪ್ರಯಾಗಕ್ಕೆ ತೆರಳಿದರು. ಪ್ರಯಾಗದಲ್ಲಿ ಅವರು ತಮ್ಮ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ಮುಂದುವರಿಸಿದರು.

ಬಿ.ಟಿ.ಯನ್ನು ಪೂರ್ಣಗೊಳಿಸಿದ ಅನಂತರ ಅವರು ಆರ್‌ಎಸ್‌ಎಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡರು,. ಉತ್ತರಪ್ರದೇಶದ ಲಖಿಂಪುರ ಜಿಲ್ಲೆಗೆ ಸಂಘಟಕರಾಗಿ ತೆರಳಿದ ಅವರು 1955ರಲ್ಲಿ ಯುಪಿಯಲ್ಲಿ ಆರ್‌ಎಸ್‌ಎಸ್‌ನ ಪ್ರಾಂತೀಯ ಸಂಘಟಕರಾಗಿ ಆಯ್ಕೆಯಾದರು.

ಪತ್ರಕರ್ತರಾಗಿ ಉಪಾಧಯರು

ಉತ್ತರ ಪ್ರದೇಶದ ಲಕ್ನೋದಲ್ಲಿ ‘ರಾಷ್ಟ್ರ ಧರ್ಮ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ ಅವರು ತಮ್ಮ ತತ್ತ್ವಗಳನ್ನು ಪ್ರತಿಪಾದಿಸಲು ‘ರಾಷ್ಟ್ರ ಧರ್ಮ’ ಮಾಸಪತ್ರಿಕೆ, ಅನಂತರ ‘ಪಾಂಚಜನ್ಯ’ ವಾರಪತ್ರಿಕೆ ಮತ್ತು ನಂತರ ‘ಸ್ವದೇಶ್’ ದಿನಪತ್ರಿಕೆಯನ್ನು ಪ್ರಾರಂಭಿಸಿದರು.

ರಾಜಕೀಯ ಪ್ರವೇಶ

1950ರಲ್ಲಿ ಕೇಂದ್ರ ಸಚಿವರಾಗಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ನೆಹರು ಅವರ ಲಿಯಾಕತ್ ಒಪ್ಪಂದವನ್ನು ವಿರೋಧಿಸಿ ಕ್ಯಾಬಿನೆಟ್ ಹುದ್ದೆಗೆ ರಾಜೀನಾಮೆ ನೀಡಿದರು. ಪ್ರಜಾಪ್ರಭುತ್ವ ಶಕ್ತಿಗಳನ್ನು ಒಗ್ಗೂಡಿಸಲು ವಿರೋಧ ಪಕ್ಷಕ್ಕೆ ಸೇರಿದರು. ರಾಜಕೀಯ ಕೆಲಸವನ್ನು ಮುಂದುವರಿಸಲು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದಾದ ಯುವಕರನ್ನು ಹುಡುಕುತ್ತಿದ್ದ ಅವರಿಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪರಿಚಯವಾಯಿತು.

1951ರ ಸೆಪ್ಟೆಂಬರ್ 21ರಂದು ದೀನ್ ದಯಾಳ್ ಅವರು ಉತ್ತರಪ್ರದೇಶದಲ್ಲಿ ರಾಜಕೀಯ ಸಮಾವೇಶವನ್ನು ಕರೆದರು ಮತ್ತು ಹೊಸ ಪಕ್ಷವಾದ ಭಾರತೀಯ ಜನಸಂಘದ ರಾಜ್ಯ ಘಟಕವನ್ನು ಸ್ಥಾಪಿಸಿದರು.
ಬಳಿಕ ಅವರು ರಾಜಕೀಯದಲ್ಲಿ ಸಕ್ರಿಯರಾದರು. 1951ರ ಅಕ್ಟೋಬರ್ 21ರಂದು ನಡೆದ ಮೊದಲ ಅಖಿಲ ಭಾರತ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದರು.

Pandit Deendayal Upadhyaya

ದುರಂತ ಅಂತ್ಯ

ಭಾರತೀಯ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಘಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ಪಂಡಿತ್ ದೀನದಯಾಳ್ ಅವರು 1968ರ ಫೆಬ್ರವರಿ 10ರಂದು ಲಕ್ನೋನಿಂದ ಪಾಟ್ನಾಗೆ ತೆರಳಲು ಸಿಯಾಲ್ದಾ ಎಕ್ಸ್ ಪ್ರೆಸ್ ರೈಲು ಹತ್ತಿದ್ದರು. ಮರುದಿನ ರೈಲು ಮೊಘಲ್‌ಸಾರಾಯ್ ನಿಲ್ದಾಣವನ್ನು ತಲುಪಿದಾಗ ಅವರು ಸಿಗಲಿಲ್ಲ. ಅವರ ಪಾರ್ಥಿವ ಶರೀರ ರೈಲು ನಿಲ್ದಾಣದ ಹತ್ತಿರದಲ್ಲಿ ದೊರೆಯಿತು.

Antyodaya Diwas 2024: ಇಂದು ಅಂತ್ಯೋದಯ ದಿನಾಚರಣೆ; ಈ ದಿನದ ವಿಶೇಷ ಏನು?

ಈ ಕುರಿತು ತನಿಖೆ ನಡೆಸಿದ ಕೇಂದ್ರೀಯ ತನಿಖಾ ದಳದ ಪ್ರಕಾರ, ಡಕಾಯಿತರ ತಂಡವೊಂದು ದೀನ್ ದಯಾಳರ ಮೇಲೆ ಆಕ್ರಮಣ ಮಾಡಿ ಅವರನ್ನು ರೈಲಿನಿಂದ ಕೆಳಕ್ಕೆ ತಳ್ಳಿತು ಎಂಬ ಸಂಗತಿ ತಿಳಿಯಿತು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಭರತ್ ಲಾಲ್ ಮತ್ತು ರಾಮ್ ಅವಧ್ ಎಂಬವರನ್ನು ಬಂಧಿಸಲಾಯಿತಾದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರಿಬ್ಬರೂ ಬಿಡುಗಡೆಯಾದರು. ಹೀಗೆ ಉಪಾಧ್ಯಯರ ಬದುಕು ನಿಗೂಢವಾಗಿಯೇ ಅಂತ್ಯವಾಯಿತು. ಆದರೆ ದೀನದಯಾಳ್ ಉಪಾಧ್ಯಾಯ ಅವರ ಚಿಂತನೆ ಇಂದಿಗೂ ಪ್ರಖರವಾಗಿದೆ.