Sunday, 15th December 2024

ಕಾಗದ ರಹಿತ ಬಜೆಟ್‌ ಮಂಡಿಸಿದ ಹಣಕಾಸು ಸಚಿವ ಪಿ.ತ್ಯಾಗರಾಜನ್‌

ಚೆನ್ನೈ: ಎಐಎಡಿಎಂಕೆ ಸದಸ್ಯರ ಸಭಾತ್ಯಾಗದ ನಡುವೆಯೇ ಡಿಎಂಕೆ ನೇತೃತ್ವದ ಸರ್ಕಾರ ಶುಕ್ರವಾರ ತನ್ನ ಮೊದಲ ಬಜೆಟ್‌ ಮಂಡಿಸಿತು. ಹಣಕಾಸು ಸಚಿವ ಪಲನ್ವೇಲ್‌ ತ್ಯಾಗರಾಜನ್‌ ಅವರು ಮೊದಲ ಬಾರಿಗೆ ಕಾಗದ ರಹಿತ ಬಜೆಟ್‌ ಮಂಡಿಸಿದರು.

ವಿಧಾನಸಭಾಧ್ಯಕ್ಷ ಅಪ್ಪಾವು ಅವರು ಕಂಪ್ಯೂಟರ್‌ಗಳಲ್ಲಿ ಹೇಗೆ ಆಯ-ವ್ಯಯದ ದಾಖಲೆಗಳನ್ನು ಓದಬೇಕು ಎಂಬುದರ ಬಗ್ಗೆ ಶಾಸಕರಿಗೆ ಸಲಹೆ ನೀಡಿದರು. ನಂತರ, ವಿರೋಧ ಪಕ್ಷದ ನಾಯಕ ಕೆ.ಪಳನಿಸ್ವಾಮಿ, ಅಧಿವೇಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿ ತಾವು ಸಿದ್ಧಪಡಿಸಿಕೊಂಡು ತಂದಿದ್ದ ಮಾಹಿತಿಯನ್ನು ಓದಲು ಪ್ರಾರಂಭಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌, ‘ಸಾಮಾನ್ಯ ಚರ್ಚೆಯ ವೇಳೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಈಗ ಕುಳಿತುಕೊಳ್ಳಿ’ ಎಂದು ಹೇಳಿದರು. ಆದರೆ ಪಳನಿಸ್ವಾಮಿ ತಮ್ಮ ಮಾತುಗಳನ್ನು ಮುಂದುವರಿಸಿದರು.

ಮಾತು ಮುಗಿಯುತ್ತಿದ್ದಂತೆ ಎಐಎಡಿಎಂಕೆ, ಬಿಜೆಪಿ ಮತ್ತು ಪಿಎಂಕೆ ಸೇರಿದಂತೆ ವಿಪಕ್ಷಗಳ ಎಲ್ಲ ಶಾಸಕರು ಪಳನಸ್ವಾಮಿ ನೇತೃತ್ವದಲ್ಲಿ ಸದನದಿಂದ ಹೊರ ನಡೆದರು.