ಇಂಗ್ಲೆಂಡ್ : ಇಂಗ್ಲೆಂಡ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಮಯಕ್ಕೆ ಹೆಚ್ಚು ಮೌಲ್ಯ ನೀಡಲಾಗುತ್ತದೆ. ಹಾಗಾಗಿ ಇಲ್ಲಿ ಸುಮ್ಮನೆ ಬೇರೆಯವರ ಸಮಯ ವ್ಯರ್ಥ ಮಾಡುವವರಿಗೆ ಸರಿಯಾದ ಶಿಕ್ಷೆ ವಿಧಿಸುತ್ತಾರೆ. ಅದರಂತೆ ಡರ್ಬಿಯಲ್ಲಿ ತನ್ನ ಕಾರನ್ನು ಪಾರ್ಕ್ ಮಾಡಿದ ನಂತರ ಶುಲ್ಕ ಪಾವತಿಸಲು ಐದು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ಮಹಿಳೆಗೆ 2 ಲಕ್ಷ (1,906 ಪೌಂಡ್) ದಂಡ (Parking Penalty Case)ವಿಧಿಸಿರುವ ಘಟನೆ ವರದಿಯಾಗಿದೆ.
ರೋಸಿ ಹಡ್ಸನ್ ಅವರಿಗೆ ಫೋನ್‍ನಲ್ಲಿ ಸರಿಯಾಗಿ ಸಿಗ್ನಲ್ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗಲಿಲ್ಲವಂತೆ. ಹಾಗಾಗಿ ಅವರು ಸಿಗ್ನಲ್ ಸಿಗುವಂತಹ ಸ್ಥಳವನ್ನು ಹುಡುಕುತ್ತಾ ಹೋಗಿದ್ದಾರೆ. ಇದರಿಂದ ಅವರು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎಂದು ಎಕ್ಸೆಲ್ ಪಾರ್ಕಿಂಗ್ ಲಿಮಿಟೆಡ್ ಅವರಿಗೆ ಪಾರ್ಕಿಂಗ್ ಶುಲ್ಕದ ನೋಟಿಸ್‍ಗಳನ್ನು ಕಳುಹಿಸಿದೆ. ಲಾಟ್‍ನಲ್ಲಿ ಪಾರ್ಕಿಂಗ್ ಮಾಡುವ ಯಾರಾದರೂ ಐದು ನಿಮಿಷಗಳಲ್ಲಿ ಶುಲ್ಕ ಪಾವತಿಸಬೇಕು, ಇಲ್ಲವಾದರೆ ದಂಡ ವಿಧಿಸುವುದಾಗಿ ಎಂದು ಕಾರ್ ಪಾರ್ಕ್ ಹೇಳಿದೆ.
ಐದು ನಿಮಿಷಗಳ ಪಾವತಿ ನಿಯಮವು ಸಂಪೂರ್ಣವಾಗಿ ಅಸಮಂಜಸವಾಗಿದೆ ಎಂದು ಹಡ್ಸನ್ ಹೇಳಿದ್ದಾರೆ . ಪಾರ್ಕಿಂಗ್ ಮೆಷಿನ್ ಮೂಲಕ ಹಣ ಪಾವತಿಸಲು ಅವರಿಗೆ ಸಾಧ್ಯವಾಗದ ಕಾರಣ ಫೋನ್ ಅಪ್ಲಿಕೇಶನ್ ಬಳಸಲು ಪ್ರಯತ್ನಿಸಿದ್ದಾರೆ. ಆದರೆ ಸರಿಯಾಗಿ ನೆಟ್‍ವರ್ಕ್ ಸಿಗದ ಕಾರಣ ಹತ್ತಿರದ ಅಂಗಡಿಯೊಳಗಿನ ವೈ-ಫೈ ಬಳಸಿ ಅಪ್ಲಿಕೇಶನ್ ಮೂಲಕ ಆನ್‍ಲೈನ್‍ನಲ್ಲಿ ಪಾವತಿಸಿರುವುದಾಗಿ ಅವರು ತಿಳಿಸಿದ್ದಾರೆ.
ಅವರು ಪ್ರತಿದಿನ ಪೂರ್ಣ ಪಾರ್ಕಿಂಗ್ ಶುಲ್ಕವನ್ನು ಪಾವತಿಸಿದ್ದಾರೆ. ಆದರೆ ಒಂದು ದಿನ ಅವರಿಗೆ ನೋಟಿಸ್ ಬಂದಿದ್ದು, ಅದರಲ್ಲಿ 28 ದಿನಗಳಲ್ಲಿ 100 ಪೌಂಡ್ ಪಾವತಿಸುವಂತೆ ಸೂಚಿಸಿದೆ. ಆಗ ಅವರು ತಕ್ಷಣ ಕಂಪನಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದಾಗ ಅವರು ಅದನ್ನು ಪಾವತಿಸಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಅವರು ಪಾರ್ಕಿಂಗ್ ದಂಡವನ್ನು ಪಾವತಿಸಿದ್ದಾರೆ. ಆದರೆ ಅವರಿಗೆ ಇನ್ನೂ ಒಂಬತ್ತು ನೋಟಿಸ್‍ಗಳು ಬಂದಿದ್ದು, ಅದರಲ್ಲಿ ಸಾಲ ವಸೂಲಾತಿ ಶುಲ್ಕ ಮತ್ತು ವಾರ್ಷಿಕ 8% ಬಡ್ಡಿಯೊಂದಿಗೆ ಶುಲ್ಕವನ್ನು ಕಟ್ಟುವಂತೆ ಸೂಚಿಸಲಾಗಿದೆ.
ಎಕ್ಸೆಲ್ ಪಾರ್ಕಿಂಗ್ ವಕ್ತಾರರು ತಿಳಿಸಿದ ಪ್ರಕಾರ, “ಕಾರ್ ಪಾರ್ಕ್‍ನಲ್ಲಿದ್ದ ಸೂಚನಾ ಫಲಕದಲ್ಲಿ ‘ಪೇ ಆನ್ ಎಂಟ್ರಿ’ ಎಂದು ಸ್ಪಷ್ಟಪಡಿಸಿದೆ ಮತ್ತು ಪಾರ್ಕಿಂಗ್ ಶುಲ್ಕವನ್ನು ಖರೀದಿಸಲು ಗರಿಷ್ಠ ಐದು ನಿಮಿಷಗಳ ಅವಧಿ ಇದೆ ಎಂದು ಸ್ಪಷ್ಟಪಡಿಸಿದೆ. ಕಾರ್ ಪಾರ್ಕ್ ಬಳಕೆಗೆ ಇದು ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳಲ್ಲಿ ಒಂದಾಗಿದೆ. ನಿಯಮಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಚಾಲಕನ ಜವಾಬ್ದಾರಿಯಾಗಿದೆ” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:ಬೀಚ್‌ನಲ್ಲಿ ಈಜಾಡುತ್ತಿದ್ದ ಮಹಿಳೆಯ ಮೇಲೆ ಏಕಾಏಕಿ ಶಾರ್ಕ್ ಅಟ್ಯಾಕ್; ಮುಂದೆ ಆಗಿದ್ದೇನು?
ಹಾಗೇ ಪ್ರತಿ ಪಾರ್ಕಿಂಗ್ ಶುಲ್ಕವನ್ನು ಫೋನ್ ಮೂಲಕ ಖರೀದಿಸಲು ಮಹಿಳೆ 14 ರಿಂದ 190 ನಿಮಿಷಗಳನ್ನು ತೆಗೆದುಕೊಂಡರು, ಸರಾಸರಿ ಸುಮಾರು ಒಂದು ಗಂಟೆ ಎಂದು ಪಾರ್ಕಿಂಗ್ ಹೇಳಿದೆ. ಈ ಪ್ರಕರಣದ ವಿಚಾರಣೆ ಆರು ತಿಂಗಳೊಳಗೆ ನ್ಯಾಯಾಲಯದಲ್ಲಿ ನಡೆಯಲಿದೆ ಎಂಬುದಾಗಿ ತಿಳಿಸಿದೆ.