Saturday, 14th December 2024

ಪಾಸ್‌ಪೋರ್ಟ್ ವೆರಿಫಿಕೇಷನ್‌ ಇನ್ನು ಐದು ದಿನಗಳಲ್ಲಿ ಪೂರ್ಣ…!

ನವದೆಹಲಿ: ಭಾರತ ಸರ್ಕಾರವು ದೆಹಲಿಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಷನ್‌ಗಾಗಿ “ಎಂಪಾಸ್ ಪೋರ್ಟ್ ಸೇವಾ” ಎಂಬ ಹೊಸ ಆನ್‌ಲೈನ್ ಸರ್ವೀಸ್ ಸೇವೆಯನ್ನು ಪ್ರಾರಂಭಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೌಲಭ್ಯ ಆರಂಭಿಸಿದ್ದು, ಈ ಸೌಲಭ್ಯದ ಮೂಲಕ ಪಾಸ್ ಪೋರ್ಟ್ ಪರಿಶೀಲನೆ ಪ್ರಕ್ರಿಯೆ ಕೇವಲ ಐದು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಹಿಂದೆ ಪಾಸ್ ಪೋರ್ಟ್ ಪರಿಶೀಲನೆಗಾಗಿ ಇದ್ದ 15 ದಿನಗಳ ಕಾಯುವಿಕೆ ಅವಧಿಯನ್ನು (ವೇಟಿಂಗ್ ಪಿರೀಯೆಡ್) ಇದು ಕಡಿಮೆ ಮಾಡುವುದಲ್ಲದೆ ಇದು ಜನರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಅನುಕೂಲಕರ ಹಾಗೂ ಸರಳವಾಗಿಸುತ್ತದೆ.

“mPassport ಸೇವಾ” ಸೌಲಭ್ಯವು ಆನ್ ಲೈನ್ ಸೇವೆಯಾಗಿದ್ದು ದೆಹಲಿಯ ನಿವಾಸಿಗಳು ಮೊಬೈಲ್, ಕಂಪ್ಯೂಟರ್ ಅಥವಾ ಟಾಬ್ಲೆಟ್ ಬಳಸಿಕೊಂಡು ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಸೇವೆಯ ಬಳಕೆಯೂ ಸರಳವಾಗಿದೆ.

ಬಳಕೆದಾರರು ಪಾಸ್ ಪೋರ್ಟ್ ಸೇವಾ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು.

ನಂತರ ಲಾಗಿನ್ ಮಾಡಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕು.

ಬಳಿಕ ಬಳಕೆದಾರರು ಅಗತ್ಯವಿರುವ ಮಾಹಿತಿಗಳನ್ನು ತುಂಬಿ, ನಿಗದಿಪಡಿಸಿದ ನಗದು ಪಾವತಿಸಿ, ಸ್ಥಳೀಯ ಪಾಸ್ ಪೋರ್ಟ್ ಸೆಂಟರ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕಾಗುತ್ತದೆ.

ಅಪಾಯಿಂಟ್ ಮೆಂಟ್ ಕನ್ಫರ್ಮ್ ಆದ ಬಳಿಕ ಅದನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ಔಟ್ ಪ್ರತಿ ಹಾಗೂ ಅಗತ್ಯವಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಗದಿಯಾಗಿರುವ ಅಪಾಯಿಂಟ್ ಮೆಂಟ್ ವೇಳೆ ಕೊಂಡೊಯ್ಯಬೇಕು.

ಪ್ರಸ್ತುತ ದೆಹಲಿ ಪೊಲೀಸರು ಪ್ರತಿದಿನ ಸರಾಸರಿ 2000ಕ್ಕೂ ಹೆಚ್ಚು ಪಾಸ್ ಪೋರ್ಟ್ ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದ್ದು, ಈ ಹೊಸ ಆನ್‌ಲೈನ್ ಸೇವೆಯಿಂದ ಅವರ ಮೇಲಿರುವ ಕೆಲಸದ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.