Friday, 12th April 2024

ಪಟಿಯಾಲ ಉದ್ವಿಗ್ನ: ಅಧಿಕಾರಿಗಳ ವರ್ಗಾವಣೆ, ಮೊಬೈಲ್‌ ಸಂಪರ್ಕ ಸ್ಥಗಿತ

ಚಂಡೀಗಡ: ಖಾಲಿಸ್ತಾನ ವಿರೋಧಿ ಮೆರವಣಿಗೆಗೆ ಸಂಬಂಧಿಸಿದ ಘರ್ಷಣೆ ಹಿನ್ನೆಲೆಯಲ್ಲಿ ಪಟಿಯಾಲದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಶನಿವಾರ ಮೂವರು ಪೊಲೀಸ್‌ ಅಧಿಕಾರಿಗಳನ್ನು ದಿಢೀರ್‌ ವರ್ಗಾವಣೆ ಮಾಡಲಾಗಿದೆ. ಮೊಬೈಲ್‌ ಸಂಪರ್ಕ ಸೇವೆಯನ್ನೂ ಕಡಿತಗೊಳಿಸಲಾಗಿದೆ.

ಪಟಿಯಾಲ ವಲಯ ಐಜಿಪಿ ಸೇರಿದಂತೆ ಮೂವರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಹೊರ ಬಿದ್ದಿದೆ.

ಮುಖವಿಂದರ್ ಸಿಂಗ್ ಚಿನ್ನಾ ಅವರನ್ನು ಪಟಿಯಾಲ ವಲಯದ ಹೊಸ ಐಜಿ ಆಗಿ ನೇಮಿಸಲಾಗಿದೆ. ದೀಪಕ್ ಪಾರಿಕ್ ಅವರು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಲಿದ್ದಾರೆ. ವಜೀರ್ ಸಿಂಗ್ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.

ಖಾಲಿಸ್ತಾನ ವಿರೋಧಿ ಮೆರವಣಿಗೆಗೆ ಸಂಬಂಧಿಸಿದಂತೆ ಪಟಿಯಾಲದಲ್ಲಿ ಶುಕ್ರವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಎರಡೂ ಗುಂಪು ಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದವು. ಈ ವೇಳೆ ನಾಲ್ವರು ಗಾಯಗೊಂಡಿದ್ದರು.

ಗೃಹ ಇಲಾಖೆಯ ಆದೇಶದ ಮೇರೆಗೆ ಪಟಿಯಾಲದಲ್ಲಿ ಪೊಲೀಸರನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

 

error: Content is protected !!