ಪಾಟ್ನಾ: ಪಾಟ್ನಾದಲ್ಲಿ ಜೂ.23 ರಂದು ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಅದಕ್ಕೂ ಒಂದು ದಿನ ಮುಂಚಿತವಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ನಗರದಲ್ಲಿ ಬೀಡುಬಿಟ್ಟಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಾಟ್ನಾ ತಲುಪಿದ ನಂತರ ಲಾಲು ಯಾದವ್ ಅವರನ್ನು ಭೇಟಿ ಮಾಡಲು ರಾಬ್ರಿ ನಿವಾಸಕ್ಕೆ ತೆರಳಲಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಬಹುದು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಪಾಟ್ನಾ ತಲುಪುತ್ತಿದ್ದಾರೆ.
ವಿರೋಧ ಪಕ್ಷದ ಹಿರಿಯ ನಾಯಕರು ಪಾಟ್ನಾಗೆ ಆಗಮಿಸುತ್ತಿರುವುದರಿಂದ ಮುಖ್ಯಮಂತ್ರಿ ನಿವಾಸ ಮಾತ್ರವಲ್ಲದೇ ಲಾಲು ಕುಟುಂಬದ ನಿವಾಸ ದಲ್ಲೂ ಇಂದಿನಿಂದ ರಾಜಕೀಯ ಚಟುವಟಿಕೆ ಹೆಚ್ಚಲಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ನಾಳೆ ಪಾಟ್ನಾ ತಲುಪಲಿದ್ದಾರೆ.
ಮುಖ್ಯಮಂತ್ರಿ ನಿವಾಸದಲ್ಲಿ ಬೆಳಗ್ಗೆ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಭೆಗೆ ಮಾರ್ಗಸೂಚಿ ಸಿದ್ಧಪಡಿಸಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಜೊತೆ ವಿರೋಧ ಪಕ್ಷಗಳ ಪ್ರಬಲ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ.
ಲೋಕಸಭೆಯ ಬಹುತೇಕ ಸ್ಥಾನಗಳಲ್ಲಿ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನಿಸಲಾಗುವುದು. ಈ ಸಭೆಗೂ ಮುನ್ನ ಲಾಲು ಯಾದವ್ ಅವರು ಬುಧವಾರ ತಡರಾತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದು, ಆ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆ ವಿರುದ್ಧ ಅರವಿಂದ್ ಕೇಜ್ರಿವಾಲ್ ದೇಶಾದ್ಯಂತ ಆಂದೋಲನ ನಡೆಸುತ್ತಿದ್ದಾರೆ. ಇದೇ ವೇಳೆ, ವಿರೋಧ ಪಕ್ಷಗಳ ಸಭೆಗೂ ಮುನ್ನವೇ ವಿರೋಧ ಪಕ್ಷದ ನಾಯಕರಿಂದ ನೆರವು ಕೋರಿ ಪತ್ರ ಬರೆದಿದ್ದಾರೆ. ಅಲ್ಲದೆ ದೆಹಲಿಯಲ್ಲಿ ತಂದಿರುವ ಸುಗ್ರೀವಾಜ್ಞೆ ಬಗ್ಗೆ ಈ ಸಭೆಯಲ್ಲಿ ಮೊದಲು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.