Tuesday, 5th November 2024

Pawan Kalyan : ಆಂಧ್ರದ ಮೈತ್ರಿ ಸರ್ಕಾರದಲ್ಲಿ ಬಿರುಕು? ಭಾರೀ ವೈರಲ್‌ ಆಗ್ತಿದೆ ಪವನ್‌ ಕಲ್ಯಾಣ್ ಈ ವಿಡಿಯೋ

Pawan Kalyan

ಹೈದರಾಬಾದ್‌: ಈ ವರ್ಷ ಆಂಧ್ರಪ್ರದೇಶದಲ್ಲಿ(Andhra Pradesh) ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ತೆಲುಗುದೇಶಂ ಪಾರ್ಟಿ (TDP) ಹಾಗೂ ಜನಸೇನಾ ಪಾರ್ಟಿ (JSP) ಸರ್ಕಾರ ರಚನೆ ಮಾಡಿತ್ತು. ಈಗ ಮಿತ್ರ ಪಕ್ಷಗಳಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಶುರುವಾಗಿದೆ. ಜೆಎಸ್ ಪಿ ನಾಯಕ ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಮಿತ್ರ ಪಕ್ಷದ ಗೃಹ ಸಚಿವೆ ಅನಿತಾರನ್ನು(Anita) ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದದಲ್ಲಿ ಭಾರೀ ವೈರಲ್‌ ಆಗ್ತಿದೆ.

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪವನ್‌ ಕಲ್ಯಾಣ್‌ ಖಂಡಿಸಿದ್ದಾರೆ. ಅವರ ಕ್ಷೇತ್ರ ಪೀಠಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಭಂಗವಾಗಿದೆ ಎಂದರು. ಭದ್ರತೆ ಸಂಪೂರ್ಣವಾಗಿ ಹದಗೆಟ್ಟಿದೆ. ಪದೇ ಪದೆ ಇಂತಹ ಘಟನೆ ನಡೆಯುತ್ತಿದ್ದರೂ ಇನ್ನೂ ಗೃಹ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ನೋಡಿ ನಾವು ಕಲಿಯಬೇಕು ಎಂದು ಹೇಳಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳುತ್ತಿದ್ದರೂ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಆಗಿಲ್ಲ. ಏನಾದರೂ ಸ್ಪಲ್ಪವಾದರೂ ಬದಲಾವಣೆಯನ್ನು ತನ್ನಿ ಎಂದಿದ್ದಾರೆ.

ಆಂಧ್ರಪ್ರದೇಶದ ಗೃಹ ಸಚಿವೆಯನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡ ಅವರು, ನೀವು ಗೃಹ ಸಚಿವೆ, ನಾನು ಪಂಚಾಯತ್‌ ರಾಜ್‌ ಹಾಗೂ ಪರಿಸರ ಸಚಿವ ನಿಮ್ಮಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಹೇಳಿ ನಿಮ್ಮ ಕೆಲಸ ನಾನು ಮಾಡುತ್ತೇನೆ ಎಂದು ಗುಡುಗಿದ್ದಾರೆ. ನೀವು ಜನರಿಗಾಗಿ ಕೆಲಸ ಮಾಡಬೇಕು, ರಾಜಕೀಯ ನಾಯಕರು, ಶಾಸಕರು ಮಾತನ್ನು ಕೇಳಲು ಬಂದಿಲ್ಲ. ನಿಮಗೂ ಜವಾಬ್ದಾರಿಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :Pawan Kalyan: ಸನಾತನ ಧರ್ಮವಿಲ್ಲದೆ ಈ ದೇಶ ಇಲ್ಲ.. ಪಕ್ಷದ ಹೊಸ ವಿಂಗ್‌ ಘೋಷಣೆ ಮಾಡಿದ ಪವನ್‌ ಕಲ್ಯಾಣ್‌!

ಪವನ್‌ ಕಲ್ಯಾಣ್ ಮಿತ್ರ ಪಕ್ಷದವರ ಬಗ್ಗೆ ಬಹಿರಂಗವಾಗಿ ತರಾಟೆ ತೆಗೆದುಕೊಂಡ ನಂತರ ಮೈತ್ರಿಯಲ್ಲಿ ಬಿರುಕು ಮೂಡಿರುವ ಅನುಮಾನ ಕಾಡತೊಡಗಿದೆ. ಘಟನೆಯ ನಂತರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟದ ಮತ್ತೋರ್ವ ಹಿರಿಯ ಸಚಿವ ಪಿ.ನಾರಾಯಣ್ ಮಾತನಾಡಿಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಅವರಿಗೆ ತಪ್ಪುಗಳನ್ನು ಎತ್ತಿ ತೋರಿಸಿ ಸಚಿವರನ್ನು ಸರಿದಾರಿಗೆ ತರುವ ಹಕ್ಕು ಇದೆ ಎಂದು ಹೇಳಿದ್ದಾರೆ.