Saturday, 9th November 2024

ಪಾಲುದಾರಿಕೆ ಮಾರಾಟ: ಭಾರತ ತೊರೆದ ಅಲಿಬಾಬ

ಮುಂಬೈ: ಪೇಟಿಎಂ ನಲ್ಲಿದ್ದ ಪಾಲುದಾರಿಕೆಯನ್ನು ಪೂರ್ಣವಾಗಿ ಮಾರಾಟ ಮಾಡಿ ರುವ ಅಲಿಬಾಬ ಸಂಸ್ಥೆ ಈ ವ್ಯವಹಾರ ದಲ್ಲಿ ಭಾರತವನ್ನು ತೊರೆದಿದೆ.
ಪೇಟಿಎಂ ನ ಮಾತೃ ಸಂಸ್ಥೆ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ (ಒಸಿಎಲ್) ನಲ್ಲಿನ ಶೇ.3.3 ರಷ್ಟು ಈಕ್ವಿಟಿ ಅಥವಾ 2.14 ಕೋಟಿ ಷೇರುಗಳನ್ನು ಮಾರಾಟ ಮಾಡಿ ಬ್ಲಾಕ್ ಡೀಲ್ ನಲ್ಲಿ ಸಂಪೂರ್ಣ ಪಾಲನ್ನು ಮಾರಾಟ ಮಾಡಿದೆ. ಇನ್ನು ಮುಂದೆ ಅಲಿಬಾಬ ಪೇಟಿಎಂ ನ ಭಾಗವಾಗಿರುವುದಿಲ್ಲ. ಇದರ ಮೊತ್ತ ಸುಮಾರು 1,380 ಕೋಟಿ ರೂ. ಆಗಿರಬಹುದು. ಇದಕ್ಕೂ ಮುನ್ನ ಸಂಸ್ಥೆ ಜನವರಿಯಲ್ಲಿ ತನ್ನ 6.26 ರಷ್ಟು ಈಕ್ವಿಟಿಯ ಪೈಕಿ ಶೇ.3.1 ರಷ್ಟು ಈಕ್ವಿಟಿಯನ್ನು ಮಾರಾಟ ಮಾಡಿತ್ತು.
ಅಲಿಬಾಬ ಈಗಾಗಲೇ ಜೊಮ್ಯಾಟೋ ಹಾಗೂ ಬಿಗ್ ಬ್ಯಾಸ್ಕೆಟ್ ಗಳಲ್ಲಿಯೂ ತನ್ನ ಪಾಲುದಾರಿಕೆಯನ್ನು ಮಾರಾಟ ಮಾಡಿರುವುದರಿಂದ, ಇತ್ತೀಚಿನ ಡೀಲ್ ನ್ನು ಅಲಿ ಬಾಬಾ ಭಾರತ ತೊರೆದಿರುವ ಡೀಲ್ ಎಂದೇ ವಿಶ್ಲೆಷಿಸಲಾಗುತ್ತಿದೆ.

ಪೇಟಿಎಂ ನಲ್ಲಿ ಚೀನಾ ಪಾಲುದಾರಿಕೆ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2023 ನೇ ಆರ್ಥಿಕ ವರ್ಷದ 3 ನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಲಾಭವನ್ನು ಘೋಷಿಸಿದ ಬಳಿಕ ಪೇಟಿಎಂ ನ ಷೇರುಗಳು ಏರಿಕೆ ಕಂಡಿತ್ತು.

ಫಿನ್ ಟೆಕ್ ದೈತ್ಯ ಸಂಸ್ಥೆಯ ಆದಾಯ 2,062 ಕೋಟಿ ರೂಪಾಯಿನಷ್ಟು ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡದರೆ ಶೇ.42 ರಷ್ಟು ಏರಿಕೆ ಕಂಡಿದೆ.