Monday, 18th November 2024

Penalty Case: ಆ್ಯಂಬುಲೆನ್ಸ್‌ ಸಂಚಾರಕ್ಕೆ ಅಡ್ಡಿಪಡಿಸಿದ ಚಾಲಕನಿಗೆ ಬಿತ್ತು 2.5 ಲಕ್ಷ ರೂ. ದಂಡ

Penalty Case

ತಿರುವನಂತಪುರಂ: ಕೇರಳದ ಚಲಕುಡಿಯಲ್ಲಿ ಕಾರು ಚಾಲಕನೊಬ್ಬ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಅಡ್ಡಿಪಡಿಸಿದ ಹಿನ್ನೆಲೆ ಆತನ ಲೈಸೆನ್ಸ್‌ ರದ್ದು ಪಡಿಸಿ 2.5 ಲಕ್ಷ ರೂ. ದಂಡ(Penalty Case) ವಿಧಿಸಿದ್ದಾರೆ. ಆ್ಯಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ರಸ್ತೆಯಲ್ಲಿ ಕಾರಿನ ಚಾಲಕ ಮುಂದೆ ಹೋಗಲು ಬಿಡದೆ ಅಡ್ಡ ಹಾಕಿದ್ದಾನಂತೆ. ಇದನ್ನು ಆ್ಯಂಬುಲೆನ್ಸ್‌ನಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿದ್ದಾರೆ.

ಈ ವಿಡಿಯೊದಲ್ಲಿ ಆ್ಯಂಬುಲೆನ್ಸ್‌ ರಸ್ತೆಯಲ್ಲಿ ಹೋಗುವಾಗ ಸಿಲ್ವರ್ ಬಣ್ಣದ ಮಾರುತಿ ಸುಜುಕಿ ಸಿಯಾಜ್ ಕಾರಿನಲ್ಲಿರುವವನು ಎರಡು ನಿಮಿಷಗಳಿಗೂ ಹೆಚ್ಚು ಕಾಲ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಬಿಡದೆ ಅಡ್ಡಹಾಕಿದ್ದಾನಂತೆ. ಆ್ಯಂಬುಲೆನ್ಸ್‌ ಚಾಲಕನ ಪದೇ ಪದೇ ಹಾರ್ನ್ ಮತ್ತು ಸೈರನ್ ಹಾಕಿದರೂ, ಸಿಯಾಜ್ ಚಾಲಕ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಬಿಡಲಿಲ್ಲ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದ ನಂತರ  ಕೇರಳ ಪೊಲೀಸರು ತ್ವರಿತವಾಗಿ ವಾಹನ ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ಘಟನೆಯ ವಿಡಿಯೊವನ್ನು ಬಳಕೆದಾರ @coolfunnytshirt ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, 3.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಪೊಲೀಸರ ಈ ತ್ವರಿತ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ವಾಹನ ಚಾಲಕನ ನಡವಳಿಕೆಯನ್ನು ಟೀಕಿಸಿದ್ದಾರೆ.

ಈ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, “ಇದು ಜೀವಗಳನ್ನು ಅಪಾಯಕ್ಕೆ ತಳ್ಳುವ ಬೇಜವಾಬ್ದಾರಿಯುತ ಚಾಲನೆಯಾಗಿದೆ. ತಕ್ಕ ಪಾಠ ಕಲಿಸಿದ ಪೊಲೀಸರಿಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, “ಯಾರು ಆ್ಯಂಬುಲೆನ್ಸ್‌ ಅನ್ನು ನಿರ್ಲಕ್ಷಿಸುತ್ತಾರೆ ಅವರು ಈ ಶಿಕ್ಷೆಗೆ ಅರ್ಹರು.”ಎಂದಿದ್ದಾರೆ.

ಇದನ್ನೂ ಓದಿ:ರೀಲ್ ಮಾಡಲು ಹೋಗಿ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ! ವಿಡಿಯೊ ನೋಡಿ

ಮೂರನೇ ನೆಟ್ಟಿಗರು, “ದಂಡ ವಿಧಿಸಿದ್ದು ಒಳ್ಳೆಯದು, ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಕೆಲವು ಚಾಲಕರಿಗೆ ಪಾಠ ಕಲಿಸಲು ಇದು ಏಕೈಕ ಮಾರ್ಗವಾಗಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಧನ್ಯವಾದಗಳು, ಕೇರಳ ಪೊಲೀಸ್! ದೇಶಾದ್ಯಂತ ಈ ರೀತಿಯ ಕಠಿಣ ಕ್ರಮಗಳ ಅಗತ್ಯವಿದೆ” ಎಂದು ಹೇಳಿದ್ದಾರೆ. “ವಾಹನ ಚಾಲಕರಿಗೆ ಮೊದಲಿನಿಂದಲೂ ತುರ್ತು ಶಿಷ್ಟಾಚಾರದ ಬಗ್ಗೆ ಶಿಕ್ಷಣ ನೀಡಬೇಕು” ಎಂದು ಇನ್ನೊಬ್ಬರು ತಿಳಿಸಿದ್ದಾರೆ.