ನವದೆಹಲಿ: ಗರ್ಭಧಾರಣೆ(28 ವಾರಗಳ) ಯನ್ನು ಕೊನೆಗೊಳಿಸುವಂತೆ ಕೋರಿ ಅವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಈ ವಿಷಯದಲ್ಲಿ ಹೈಕೋರ್ಟ್ ಫೆಬ್ರವರಿ 1 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ವಿಚಾರಣೆಯ ಸಮಯದಲ್ಲಿ, ಆಗ 28 ವಾರಗಳ ಗರ್ಭಿಣಿಯಾಗಿದ್ದ ಮಹಿಳೆಯ ಪರ ವಕೀಲರು ತಮ್ಮ ಕಕ್ಷಿದಾರರಿಗೆ 20 ವರ್ಷ ವಯಸ್ಸಾಗಿದೆ ಮತ್ತು ಇತ್ತೀಚೆಗೆ ಆಕೆಯ ಗರ್ಭಧಾರಣೆಯ ಬಗ್ಗೆ ತಿಳಿದಿದೆ ಎಂದು ವಾದಿಸಿದ್ದರು. ಮಗುವನ್ನು ಹೆರುವ ಸ್ಥಿತಿಯಲ್ಲಿಲ್ಲದ ಕಾರಣ ಗರ್ಭಪಾತ ಮಾಡಲು ವೈದ್ಯರನ್ನು ಸಂಪರ್ಕಿಸಿದ್ದೇನೆ ಎಂದು ಆಕೆಯ ವಕೀಲರು ಹೇಳಿದರು. ಆದರೆ, ಗರ್ಭಧಾರಣೆ 24 ವಾರಗಳನ್ನು ಮೀರಿದ ಕಾರಣ ನಿರಾಕರಿಸಿದ್ದರು.
ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆಯು ಗರಿಷ್ಠ 24 ವಾರಗಳಲ್ಲಿ ಗರ್ಭಪಾತಕ್ಕೆ ಅನುಮತಿಸುತ್ತದೆ. ವೈದ್ಯಕೀಯ ಮಂಡಳಿಯ ಅನುಮತಿಗೆ ಒಳಪಟ್ಟು, 24 ವಾರಗಳ ನಂತರವೂ ಗರ್ಭಪಾತ ಮಾಡಬಹುದು.