Friday, 22nd November 2024

Petticoat Cancer: ಸೀರೆ ಧರಿಸುವುದರಿಂದಲೂ ಕ್ಯಾನ್ಸರ್‌ ಬರುತ್ತಾ? ಏನಿದಕ್ಕೆ ಕಾರಣ? ರೋಗ ಲಕ್ಷಣವೇನು?

Petticoat Cancer

ಸೀರೆಯನ್ನು ಉಡುವುದು (Draping Sarees) ಬಹುತೇಕ ಎಲ್ಲ ಮಹಿಳೆಯರಿಗೂ ಪ್ರಿಯವಾಗಿರುತ್ತದೆ. ಆದರೆ ಮಹಿಳೆಯರಿಗೆ ಈಗ ಶಾಕ್ ಕೊಡುವ ಸುದ್ದಿಯೊಂದಿದೆ. ಸೀರೆ ಜಾರದಿರಲಿ ಎಂದು ಕೆಲವರು ಬಿಗಿಯಾಗಿ ಕಟ್ಟುತ್ತಾರೆ. ಇದರಿಂದ ಕ್ಯಾನ್ಸರ್ (Petticoat Cancer) ಬರುತ್ತೆ ಎನ್ನುತ್ತಾರೆ ವೈದ್ಯರು. ಚರ್ಮ ಕ್ಯಾನ್ಸರ್‌ನ ಆಘಾತಕಾರಿ ಸುದ್ದಿಯೊಂದು ಇತ್ತೀಚೆಗೆ ಹೊರಬಿದ್ದಿದೆ. ಸಾಂಪ್ರದಾಯಿಕ ಸೀರೆ ಮತ್ತು ಅವುಗಳನ್ನು ತೊಡುವ ರೀತಿಯಿಂದ ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ ಎಂಬುದನ್ನು ಬಿಹಾರ ಮತ್ತು ಮಹಾರಾಷ್ಟ್ರದ ವೈದ್ಯರು ದೃಢಪಡಿಸಿದ್ದಾರೆ.

ಸೊಂಟದ ಸುತ್ತ ತುಂಬಾ ಬಿಗಿಯಾಗಿ ಸ್ಕರ್ಟ್ ಧರಿಸುವುದರಿಂದ “ಪೆಟ್ಟಿಕೋಟ್ ಕ್ಯಾನ್ಸರ್” ಎಂಬ ಅಪರೂಪದ ಚರ್ಮದ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಇದು ಬಿಗಿಯಾಗಿ ಸೊಂಟಕ್ಕೆ ಕಟ್ಟುವ ದಾರದಿಂದ ಉಂಟಾಗುತ್ತದೆ. ಇದು ಚರ್ಮದ ಮೇಲೆ ನಿರಂತರ ಒತ್ತಡ ಮತ್ತು ಘರ್ಷಣೆಯನ್ನು ಉಂಟು ಮಾಡುತ್ತದೆ. ಇದರಿಂದ ಸೊಂಟದ ಮೇಲೆ ವಾಸಿಯಾಗದ ಹುಣ್ಣುಗಳಾಗುತ್ತವೆ. ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ. ವಯಸ್ಸಾದ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಪೆಟಿಕೋಟ್ ಕ್ಯಾನ್ಸರ್ ಎಂದರೇನು?

ಪೆಟಿಕೋಟ್ ಕ್ಯಾನ್ಸರ್ ಅಥವಾ ಮಾರ್ಜೋಲಿನ್ ಹುಣ್ಣು ದೀರ್ಘಕಾಲದ ಚರ್ಮದ ಗಾಯದಿಂದ ಉಂಟಾಗುವ ಚರ್ಮದ ಕ್ಯಾನ್ಸರ್ ಆಗಿದೆ. ಸಾಮಾನ್ಯವಾಗಿ ಚರ್ಮದ ಮೇಲೆ ಗಾಯಗಳಾದಾಗ ಸ್ವತಃ ವಾಸಿಯಾಗುತ್ತದೆ. ಆದರೆ ಆ ಗಾಯವನ್ನು ನಿರಂತರವಾಗಿ ಉಜ್ಜಿದರೆ ಅಥವಾ ಒತ್ತಿದರೆ ಅದು ವಾಸಿಯಾಗದ ಹುಣ್ಣಾಗುತ್ತದೆ. ಸೀರೆಯ ಪೆಟಿಕೋಟ್‌ಗಳನ್ನು ಮಹಿಳೆಯರು ಪ್ರತಿದಿನ ಬಿಗಿಯಾಗಿ ಕಟ್ಟಿದಾಗ ಆ ಪ್ರದೇಶದಲ್ಲಿ ದೀರ್ಘಕಾಲದ ಉರಿಯೂತ ಮತ್ತು ವಾಸಿಯಾಗದ ಹುಣ್ಣುಗಳು ಉಂಟಾಗಬಹುದು. ಕಾಲಾನಂತರದಲ್ಲಿ ಇದು ಚರ್ಮದ ಕ್ಯಾನ್ಸರ್ ಆಗಬಹುದು.

Petticoat Cancer

ಎರಡು ಪ್ರಕರಣಗಳು ಪತ್ತೆ

ವಾರ್ಧಾದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಮಧುಬನಿ ವೈದ್ಯಕೀಯ ಕಾಲೇಜಿನ ವೈದ್ಯರು ದಶಕಗಳ ಕಾಲ ತಮ್ಮ ಸೊಂಟದ ಸುತ್ತ ಬಿಗಿಯಾಗಿ ಸೀರೆಗಳನ್ನು ಕಟ್ಟಿಕೊಂಡಿದ್ದ ವಯಸ್ಸಾದ ಮಹಿಳೆಯರಲ್ಲಿ ಚರ್ಮದ ಕ್ಯಾನ್ಸರ್ ನ ಎರಡು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಒಬ್ಬ ಮಹಿಳೆ ತನ್ನ ಸೊಂಟದ ಮೇಲೆ 18 ತಿಂಗಳ ಕಾಲ ಹುಣ್ಣು ಹೊಂದಿದ್ದು ಅದು ವಾಸಿಯಾಗಲಿಲ್ಲ. ಇನ್ನೊಬ್ಬ ಮಹಿಳೆಗೆ ಎರಡು ವರ್ಷಗಳಿಂದ ಹುಣ್ಣು ಇತ್ತು. ಅದು ಹತ್ತಿರದ ದುಗ್ಧರಸ ಗ್ರಂಥಿಗಳಿಗೆ ಹರಡಿತು. ಇಬ್ಬರಿಗೂ ದೀರ್ಘಕಾಲದ ಗಾಯಗಳಿಂದ ಉಂಟಾಗುವ ಚರ್ಮದ ಕ್ಯಾನ್ಸರ್ ಎಂದು ರೋಗ ನಿರ್ಣಯ ಮಾಡಲಾಗಿದೆ.

ಬಿಗಿಯಾದ ಬಟ್ಟೆ ಕ್ಯಾನ್ಸರ್‌ಗೆ ಹೇಗೆ ಕಾರಣವಾಗುತ್ತದೆ?

ನಿರಂತರವಾಗಿ ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಚರ್ಮದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅದರಲ್ಲೂ ಮಹಿಳೆಯರ ಸೊಂಟದ ಚರ್ಮವು ಪೆಟಿಕೋಟ್‌ನ ಬಿಗಿಯಾದ ಸೊಂಟದ ಬಳ್ಳಿಯಿಂದ ನಿರಂತರ ಒತ್ತಡ ಮತ್ತು ಘರ್ಷಣೆಯನ್ನು ಅನುಭವಿಸುತ್ತದೆ.

ಒಂದೇ ಸ್ಥಳದಲ್ಲಿ ಚರ್ಮದ ಮೇಲೆ ನಿರಂತರವಾಗಿ ಉಜ್ಜಿದಾಗ ಅದು ಹಾನಿಗೊಳಗಾಗಬಹುದು. ಗಾಯವನ್ನು ಸರಿಯಾಗಿ ಗುಣಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಈ ಗಾಯಕ್ಕೆ ಚಿಕಿತ್ಸೆ ದೊರೆಯದೇ ಇದ್ದರೆ ಕ್ಯಾನ್ಸರ್ ಹುಣ್ಣಾಗಿ ಬದಲಾಗಬಹುದು.

ಪೆಟಿಕೋಟ್ ಕ್ಯಾನ್ಸರ್‌ನ ಲಕ್ಷಣಗಳೇನು?

ಸೊಂಟದ ಸುತ್ತ ವಾರ, ತಿಂಗಳುಗಳವರೆಗೆ ವಾಸಿಯಾಗದ ಹುಣ್ಣು ಅದನ್ನು ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಹುಣ್ಣಿನ ಸುತ್ತಲಿನ ಚರ್ಮ ದಪ್ಪವಾಗುವುದು, ಬಣ್ಣ ಬದಲಾವಣೆ ಪೆಟಿಕೋಟ್ ಕ್ಯಾನ್ಸರ್‌ನ ಲಕ್ಷಣಗಳಾಗಿವೆ. ಈ ಹುಣ್ಣುಗಳು ದೀರ್ಘಕಾಲ ಉಳಿದರೆ ತೊಡೆಸಂದು ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತವೆ.

Petticoat Cancer

ತಡೆಗಟ್ಟುವ ವಿಧಾನಗಳೇನು?

ಪೆಟಿಕೋಟ್ ಕ್ಯಾನ್ಸರ್‌ನ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಅದು ಸೀರೆಯನ್ನು ಧರಿಸುವ ವಿಧಾನವನ್ನು ಬದಲಾಯಿಸುವ ಮೂಲಕ ಈ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಬಹುದು. ಪೆಟಿಕೋಟ್ ಅನ್ನು ಹೆಚ್ಚು ಬಿಗಿಯಾಗಿ ಕಟ್ಟಬಾರದು ಎನ್ನುತ್ತಾರೆ ತಜ್ಞರು.

Neem Leaf: ಕಹಿಯೆಂದು ಬೇವಿನ ಎಲೆಯನ್ನು ದೂರ ಎಸೆಯಬೇಡಿ; ಆರೋಗ್ಯಕ್ಕೆ ಎಷ್ಟೆಲ್ಲ ಪ್ರಯೋಜನವಿದೆ ನೋಡಿ

ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮುಖ್ಯ?

ಪೆಟಿಕೋಟ್ ಕ್ಯಾನ್ಸರ್ ಅಪರೂಪವಾದರೂ ಈ ಬಗ್ಗೆ ಜಾಗೃತಿ ಮುಖ್ಯವಾಗಿದೆ. ಪ್ರತಿದಿನ ಬಿಗಿಯಾಗಿ ಕಟ್ಟುವ ಸೀರೆಗಳು ಚರ್ಮದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಬಿಗಿಯಾದ ಬಟ್ಟೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಅನೇಕ ಮಹಿಳೆಯರಿಗೆ ತಿಳಿದಿರುವುದಿಲ್ಲ. ಈ ಬಗ್ಗೆ ಜಾಗೃತಿಯನ್ನು ಹರಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಅನೇಕರಿಗೆ ಸಹಾಯ ಮಾಡಬಹುದು.