ಜೈಪುರ: ಮಗಳನ್ನು ಅತ್ಯಾಚಾರಗೈದಿರುವ ಕಿಡಿಗೇಡಿಯನ್ನು ಕಪಾಳಕ್ಕೆರಡು ಬಾರಿಸಿ, ಆತನಿಗೆ ಕಠಿಣಾತಿಕಠಿಣ ಶಿಕ್ಷೆಯಾಗುವವರೆಗೆ ಛಲ ಬಿಡದೇ ಹೋರಾಡುವ ತಂದೆ ತಾಯಂದಿರನ್ನು ನಾವು ನೋಡಿರ್ತೇವೆ. ಆದರೆ ಅತ್ಯಾಚಾರ(Physical Harassment) ಆರೋಪಿಗೆ ಜಾಮೀನು ಸಿಗಲು ಸಾಕ್ಷ್ಯಾಧಾರಗಳನ್ನು ಸಂತ್ರಸ್ತೆಯ ತಂದೆಯೇ ತಿರುಚಿರುವ ಘಟನೆಯೊಂದು ರಾಜಸ್ಥಾನ (Rajasthan)ದಲ್ಲಿ ನಡೆದಿದೆ.
ಘಟನೆ ವಿವರ:
ತನ್ನ ಚಿಕ್ಕಮ್ಮ ತನ್ನನ್ನು ಹರಿಯಾಣದ ನಿವಾಸಿ ಸಂದೀಪ್ ಯಾದವ್ ಎಂಬುವವರಿಗೆ ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಮತ್ತು ನಂತರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಜುಲೈನಲ್ಲಿ ಬಾಲಕಿ ಎಫ್‌ಐಆರ್ ದಾಖಲಿಸಿದ್ದಳು. ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆಯ ನಂತರ, ಆಕೆಯ ಚಿಕ್ಕಮ್ಮ, ಸಂದೀಪ್ ಯಾದವ್ ಮತ್ತು ಅವರ ತಂದೆ ಸತ್ವೀರ್ ಯಾದವ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಮಧ್ಯೆ, ಬಾಲಕಿಯ ತಂದೆ ಸಂಜಯ್ ಆರೋಪಿಗಳಿಗೆ ಜಾಮೀನು ಪಡೆಯಲು ಅನುಕೂಲ ಮಾಡಿಕೊಡಲು ಉತ್ತರ ಪ್ರದೇಶದ ಖಾಸಗಿ ಶಾಲೆಯೊಂದನ್ನು ಸಂಪರ್ಕಿಸಿ, ಬಾಲಕಿ ವಯಸ್ಕಳೇ ಹೊರತು ಅಪ್ರಾಪ್ತಳಲ್ಲ ಎಂದು ಸುಳ್ಳು ದಾಖಲೆ ಪಡೆಯಲು ಯತ್ನಿಸಿದ್ದಾನೆ. “ಶಾಲಾ ಮುಖ್ಯೋಪಾಧ್ಯಾಯ ಪ್ರಣನಾಥ್ ಮಲ್ ಅವರು ಶಾಲೆಯ ರಿಜಿಸ್ಟರ್ ಅನ್ನು ತಿದ್ದಿದ್ದಾರೆ ಮತ್ತು ಸುಳ್ಳು ಜನನ ದಾಖಲೆ ನೀಡಿದ್ದಾರೆ. ಹುಡುಗಿಯ ಜನ್ಮ ವರ್ಷ 2003 ಎಂದು ಡಾಕ್ಯುಮೆಂಟ್ ತಪ್ಪಾಗಿ ಹೇಳಿದೆ. ಜನ್ಮ ವರ್ಷವನ್ನು 2010 ರಿಂದ 2003 ಕ್ಕೆ ಬದಲಾಯಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಬಾಲಕಿ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ಆಕೆಯ ಅಪ್ರಾಪ್ತ ವಯಸ್ಸಿನ ದಾಖಲೆಯನ್ನು ಪಡೆದುಕೊಂಡಿದ್ದಾರೆ ಎಂದು ಎಸ್‌ಎಚ್‌ಒ ಹೇಳಿದರು. ಎರಡನೇ ದಾಖಲೆಗಳು ಬಂದಾಗ, ಇದು ಸುಳ್ಳು ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಪರಿಶೀಲನೆಗಾಗಿ ತಂಡವನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿದೆ.
“ಶಾಲಾ ರಿಜಿಸ್ಟರ್‌ನಲ್ಲಿ ಟ್ಯಾಂಪರಿಂಗ್ ಮಾಡಿರುವುದನ್ನು ತಂಡ ಪತ್ತೆ ಮಾಡಿದೆ. ರಿಜಿಸ್ಟರ್ ವಶಪಡಿಸಿಕೊಂಡು ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಬಾಲಕಿಯ ತಂದೆ ಸುಳ್ಳು ದಾಖಲೆ ಕೇಳಲು ತನ್ನನ್ನು ಸಂಪರ್ಕಿಸಿದ್ದರು ಎಂದು ಹೇಳಿದ್ದಾನೆ. ಇದಾದ ಬಳಿಕ ಶನಿವಾರ ರಾತ್ರಿ ಬಾಲಕಿಯ ತಂದೆಯನ್ನೂ ಬಂಧಿಸಲಾಗಿದೆ’ ಎಂದು ಅವರು ಹೇಳಿದರು.
ಪ್ರಾಂಶುಪಾಲರನ್ನು ಗುರುವಾರ ಡಿಯೋರಿಯಾದಿಂದ ಬಂಧಿಸಲಾಗಿದ್ದು, ಬಾಲಕಿಯ ತಂದೆ ಶನಿವಾರ ರಾತ್ರಿ ರಾಜಸ್ಥಾನದ ಬೆಹ್ರೋರ್‌ನಿಂದ ಸಿಕ್ಕಿಬಿದ್ದಿದ್ದಾರೆ ಎಂದು ಮುರಳಿಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುನಿಲ್ ಕುಮಾರ್ ಜಂಗೀರ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಜನನಿಬಿಡ ರಸ್ತೆ ಸಮೀಪವೇ ಮಹಿಳೆ ಮೇಲೆ ಅತ್ಯಾಚಾರ- ಕಿಡಿಗೇಡಿ ಎಸ್ಕೇಪ್; ವಿಡಿಯೋ ರೆಕಾರ್ಡ್ ಮಾಡಿದವ ಅರೆಸ್ಟ್