Friday, 22nd November 2024

Sabarimala Temple : ಅಯ್ಯಪ್ಪ ಭಕ್ತರೇ ಗಮನಿಸಿ; ವಿಮಾನ ಪ್ರಯಾಣದಲ್ಲಿ ಕ್ಯಾಬಿನ್‌ನಲ್ಲಿಯೇ ‘ಇರುಮುಡಿ’ ಇಟ್ಟುಕೊಳ್ಳಲು ಅವಕಾಶ

Sabarimala Temple

ಬೆಂಗಳೂರು: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ (Sabarimala Temple) ಹೋಗುವ ಯಾತ್ರಾರ್ಥಿಗಳು ಈಗ ವಿಮಾನಗಳಲ್ಲಿ ತಮ್ಮ ಕ್ಯಾಬಿನ್ ಬ್ಯಾಗೇಜ್‌ ಜತೆಯೇ ದೇವರಿಗೆ ಅರ್ಪಿಸಲು ಕೊಂಡೊಯ್ಯು ತುಪ್ಪ ತುಂಬ ತೆಂಗಿನ ಕಾಯಿಗಳಿರುವ ‘ಇರುಮುಡಿ’ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಜನವರಿ 20, 2025 ರವರೆಗೆ ಈ ಅವಕಾಶ ನೀಡಿದೆ. ನವೆಂಬರ್ ಮಧ್ಯದಲ್ಲಿ ಎರಡು ತಿಂಗಳ ತೀರ್ಥಯಾತ್ರೆ ಪ್ರಾರಂಭವಾಗಲಿದ್ದು, ಅದಕ್ಕಿಂತ ಕೆಲವೇ ವಾರಗಳ ಮೊದಲು ನಾಗರಿಕ ವಿಮಾನಯಾನ ಸಚಿವ ಕೆ ರಾಮ್ ಮೋಹನ್ ನಾಯ್ಡು ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕಾಲೋಚಿತ ವಿನಾಯಿತಿಯು ಅಯ್ಯಪ್ಪ ಸ್ವಾಮಿಯ ಭಕ್ತರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾಡಲಾಗಿದೆ. ಸಾಮಾನ್ಯವಾಘಿ ತೆಂಗಿನಕಾಯಿಗಳನ್ನು ಸುರಕ್ಷತಾ ಕಾಳಜಿಗಳಿಂದಾಗಿ ಕ್ಯಾಬಿನ್ ಬ್ಯಾಗೇಜ್‌ ಜತೆ ನಿಷೇಧಿಸಲಾಗಿದೆ. ಅವುಗಳಿಗೆ ಸುಡುವ ಗುಣವಿದೆ ಎಂಬ ಕಾರಣಕ್ಕೆ ನಿಷೇಧದ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಶಬರಿಮಲೆ ಯಾತ್ರಾರ್ಥಿಗಳು ಒಯ್ಯುವ ಅರ್ಪಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ತೆಂಗಿನಕಾಯಿಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ವಿನಾಯಿತಿ ನೀಡಲಾಗಿದೆ. ನಿಗದಿತ ಅವಧಿಗೆ ಮತ್ತು ನಿಗದಿತ ವಿಮಾನಗಳಿಗೆ ಇದು ಅನ್ವಯ.

ವಾಯುಯಾನ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು, ಯಾತ್ರಾರ್ಥಿಗಳು ತೆಂಗಿನಕಾಯಿಗಳನ್ನು ವಿಮಾನಕ್ಕೆ ತರುವ ಮೊದಲು ಎಕ್ಸ್-ರೇ ಸ್ಕ್ರೀನಿಂಗ್, ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಟರ್ (ಇಟಿಡಿ) ಪರೀಕ್ಷೆ ಮತ್ತು ದೈಹಿಕ ತಪಾಸಣೆ ಸೇರಿದಂತೆ ಸಮಗ್ರ ಭದ್ರತಾ ತಪಾಸಣೆಗೆ ಒಳಪಡಿಸಬೇಕಾಗುತ್ತದೆ.

‘ಇರುಮುಡಿ ಕೆಟ್ಟು’ ಚೀಲದಲ್ಲಿರುವ ತೆಂಗಿನಕಾಯಿಗಳನ್ನು ಈಗ ಕ್ಯಾಬಿನ್ ಬ್ಯಾಗೇಜ್‌ ಜತೆಗೆ ಅನುಮತಿಸಲಾಗಿದ್ದರೂ ಇತರ ಎಲ್ಲಾ ಭದ್ರತಾ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ನಾಯ್ಡು ಹೇಳಿದರು.

ಮಕರವಿಳಕ್ಕು ಸಮಯದಲ್ಲಿ ಹೋಗುವವರಿಗೆ ಅನುಕೂಲಕರ

ಶಬರಿಮಲೆ ಯಾತ್ರಾರ್ಥಿಗಳ ಪ್ರಯಾಣ ಸುಲಭಗೊಳಿಸುವ ಕ್ರಮದಲ್ಲಿ ‘ಇರುಮುಡಿ’ ಯಲ್ಲಿ ತೆಂಗಿನಕಾಯಿಗಳನ್ನು ಕ್ಯಾಬಿನ್ ಸಾಮಾನುಗಳಾಗಿ ಸಾಗಿಸಲು ನಾವು ವಿಶೇಷ ವಿನಾಯಿತಿ ನೀಡಿದ್ದೇವೆ. ಈ ಆದೇಶವು ಜನವರಿ 20, 2025 ರವರೆಗೆ ಜಾರಿಯಲ್ಲಿರುತ್ತದೆ. ಎಲ್ಲಾ ಅಗತ್ಯ ಭದ್ರತಾ ತಪಾಸಣೆಗಳು ಜಾರಿಯಲ್ಲಿರುತ್ತವೆ. ಭಕ್ತರ ಸುರಕ್ಷತೆ ಮತ್ತು ಅನುಕೂಲ ಖಚಿತಪಡಿಸಿಕೊಳ್ಳುವಾಗ ಸಂಪ್ರದಾಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವು ಈ ಹೆಜ್ಜೆ ಇಟ್ಟಿದ್ದೇವೆ” ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ.

ಶಬರಿಮಲೆ ದೇವಾಲಯದ ತೀರ್ಥಯಾತ್ರೆಯು ಪ್ರತಿವರ್ಷ ಲಕ್ಷಾಂತರ ಭಕ್ತರ ಜೀವನದ ಅವಿಭಾಜ್ಯ ಅಂಗವಾಗಿದೆ. ಯಾತ್ರೆಯ ಭಾಗವಾಗಿ ಪವಿತ್ರ ‘ಇರುಮುಡಿ ಕಟ್ಟು’ ಹೊತ್ತೊಯ್ಯುತ್ತಾರೆ. ದೇವರಿಗೆ ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಅರ್ಪಣೆಗಳನ್ನು ಒಳಗೊಂಡಿರುವ ಪವಿತ್ರ ಕಟ್ಟು ಇದಾಗಿದೆ.

ಸಂಪ್ರದಾಯದ ಪ್ರಕಾರ, ಯಾತ್ರಾರ್ಥಿಗಳು ‘ಇರುಮುಡಿ ಕಟ್ಟು’ ತಯಾರಿಸುತ್ತಾರೆ. ಒಂದು ತೆಂಗಿನಕಾಯಿಯನ್ನು ತುಪ್ಪದಿಂದ ತುಂಬಿಸುತ್ತಾರೆ. ದಾರಿಯುದ್ದಕ್ಕೂ ಎದುರಾಗುವ ಪವಿತ್ರ ಸ್ಥಳಗಳಲ್ಲಿ ಒಡೆಯಲು ಹೆಚ್ಚುವರಿ ತೆಂಗಿನಕಾಯಿಗಳನ್ನು ಕೊಂಡೊಯ್ಯುತ್ತಾರೆ.

‘ಇರುಮುಡಿ ಕಟ್ಟು’ ಅನ್ನು ತಲೆಯ ಮೇಲೆ ಹೊತ್ತವರಿಗೆ ಮಾತ್ರ ದೇವಾಲಯದ ಗರ್ಭಗುಡಿಗೆ ಹೋಗುವ 18 ಪವಿತ್ರ ಮೆಟ್ಟಿಲುಗಳನ್ನು ಏರಲು ಅವಕಾಶವಿದೆ. ಇತರ ಭಕ್ತರು ಪರ್ಯಾಯ ಮಾರ್ಗದಲ್ಲಿ ಹೋಗಬೇಕು.

ಇದನ್ನೂ ಓದಿ: Maharashtra Elections 2024 : ಉದ್ಧವ್‌ ಮಗನಿಗೆ ಚೆಕ್‌ ಮೇಟ್‌; ವರ್ಲಿಯಲ್ಲಿ ಆದಿತ್ಯ ವಿರುದ್ಧ ಮಿಲಿಂದ್‌ ದಿಯೋರಾ ಕಣಕ್ಕೆ

ಈ ತಿಂಗಳ ಆರಂಭದಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ಯಾತ್ರಾರ್ಥಿಗಳು ಆನ್‌ಲೈನ್‌ ಬುಕಿಂಗ್ ಮಾಡಿದ ನಂತರವೇ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಬೇಕು ಎಂದದ್ದಾರೆ. ಈ ಬುಕಿಂಗ್ ದಿನಕ್ಕೆ ಗರಿಷ್ಠ 80,000 ಭಕ್ತರಿಗೆ ಅವಕಾಶ ನೀಡುತ್ತದೆ.

“ಈ ಬಾರಿ ಶಬರಿಮಲೆಯಲ್ಲಿ ಸ್ಪಾಟ್ ಬುಕಿಂಗ್ ಇರುವುದಿಲ್ಲ. ನಿಲಕ್ಕಲ್ ಮತ್ತು ಎರಿಮೇಲಿಯಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ವಂ ಸಚಿವ ವಿ.ಎನ್.ವಾಸವನ್ ಹೇಳಿದ್ದಾರೆ.