Thursday, 12th December 2024

ಕಂದಕಕ್ಕೆ ಬಿದ್ದ ವಾಹನ: ಕರ್ನಾಟಕದ ನಾಲ್ವರು ಸೇರಿ ಆರು ಮಂದಿ ಸಾವು

ಪಿಥೋರಗಢ: ಉತ್ತರಾಖಂಡ್​ನ ಆದಿ ಕೈಲಾಸದ ಪ್ರವಾಸ ಮುಗಿಸಿ ವಾಪಸ್​ ಬರುತ್ತಿದ್ದಾಗ ವಾಹನ ಕಂದಕಕ್ಕೆ ಬಿದ್ದ ಪರಿಣಾಮ ಕರ್ನಾಟಕದ ಮೂಲದ ನಾಲ್ವರು ಸೇರಿ ಆರು ಜನರು ಮೃತಪಟ್ಟಿದ್ದಾರೆ.

ಮೃತ ನಾಲ್ವರನ್ನು ಬೆಂಗಳೂರಿನ ನಿವಾಸಿಗಳು ಹಾಗೂ ಮತ್ತಿಬ್ಬರನ್ನು ಪಿಥೋರಗಢದ ಸ್ಥಳೀಯರು ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಸತ್ಯಬ್ರದಾ ಪರೈದಾ (59), ನೀಲಾಲ ಪನ್ನೋಲ್ (58), ಮನೀಶ್ ಮಿಶ್ರಾ (48), ಪ್ರಜ್ಞಾ (52) ಹಾಗೂ ಪಿಥೋರಗಢದ ಹಿಮಾಂಶು ಕುಮಾರ್ (24), ವೀರೇಂದ್ರ ಕುಮಾರ್ (39) ಎಂಬವರೇ ಮೃತರು. ಎ

ಧಾರ್ಚುಲಾ ರಸ್ತೆಯ ಮೂಲಕ ಬರುತ್ತಿದ್ದಾಗ ಕಾಳಿ ನದಿಯ ಬಳಿ ಆಳವಾದ ಕಂದಕಕ್ಕೆ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ಕುರಿತು ಮಾಹಿತಿ ಪಡೆದ ತಕ್ಷಣವೇ ಪೊಲೀಸ್ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿತ್ತು. ಜೊತೆಗೆ ಎಸ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಧಾವಿಸಿತ್ತು. ಆದರೆ, ಕಂದಕ ತುಂಬಾ ಆಳವಾಗಿದ್ದರಿಂದ ಹಾಗೂ ಸಂಜೆಯ ಕತ್ತಲು ಕವಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು.

ಪಿಥೋರಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ ಸಿಂಗ್ ಪ್ರತಿಕ್ರಿಯಿಸಿ​, ”ಆರು ಜನರಿದ್ದ ಪಿಕಪ್​ ವಾಹನವು ಗುಂಜಿ ಪ್ರದೇಶದಿಂದ ಧಾರ್ಚುಲಾಗೆ ಬರುತ್ತಿತ್ತು. ಈ ವೇಳೆ, ಟ್ಯಾಂಪಾ ದೇವಸ್ಥಾನದ ಸಮೀಪ ಕಂದಕಕ್ಕೆ ಜಾರಿದ ಪರಿಣಾಮ ಚಾಲಕ ಸೇರಿ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದರು.

ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ.