Friday, 22nd November 2024

Money Talk: ಆರೋಗ್ಯ ವಿಮೆ ಖರೀದಿಸುವ ಯೋಜನೆಯಲ್ಲಿದ್ದೀರಾ? ಈ ಅಂಶಗಳು ನಿಮ್ಮ ಗಮನದಲ್ಲಿರಲಿ

Money Talk

ಬೆಂಗಳೂರು: ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಅಂದರೆ ನಿಶ್ಚಿಂತೆಯಿಂದ, ಉತ್ತಮ ಜೀವನ ಸಾಗಿಸಲು ಆರೋಗ್ಯ ಅತೀ ಮುಖ್ಯ. ಇದೇ ಕಾರಣಕ್ಕೆ ನಮ್ಮ ಹಿರಿಯರು ಆರೋಗ್ಯ ವಿಚಾರದಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಅದರಲ್ಲಿಯೂ ಇಂದಿನ ಈ ಧಾವಂತದ ಬದುಕಿನಲ್ಲಿ, ದಿನೇ ದಿನೆ  ಕಲುಷಿತವಾಗುತ್ತಿರುವ ವಾತಾವಣ, ವಿಷವಾಗುತ್ತಿರುವ ಆಹಾರದ ಮಧ್ಯೆ ಆರೋಗ್ಯವನ್ನು ಕಾಪಾಡುವುದು ಸವಾಲಿನ ಸಂಗತಿಯೇ ಹೌದು. ಆಕಸ್ಮಿಕವಾಗಿ ಅನಾರೋಗ್ಯ ಸಂಭವಿಸಿದರೆ ನಮ್ಮೆಲ್ಲ ಉಳಿತಾಯ ಚಿಕಿತ್ಸೆಗಾಗಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಈ ಪರಿಸ್ಥಿತಿ ಎದುರಾಗಬಾರದು ಎನ್ನುವ ಕಾರಣಕ್ಕೆ ಆರ್ಥಿಕ ತಜ್ಞರು ಪ್ರತಿಯೊಬ್ಬರೂ ಆರೋಗ್ಯ ವಿಮೆ (Health Insurance) ಹೊಂದಿರಬೇಕು ಎಂದು ಸಲಹೆ ನೀಡುತ್ತಾರೆ. ಹಾಗಾದರೆ ಆರೋಗ್ಯ ವಿಮೆ ಕೊಂಡುಕೊಳ್ಳುವಾಗ ಏನೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಂದಿನ ಮನಿ ಟಾಕ್‌ (Money Talk)ನಲ್ಲಿದೆ.

ಯಾಕಾಗಿ?

ಪ್ರಸ್ತುತ ಜೀವನ ವೆಚ್ಚ ದುಬಾರಿಯಾಗುತ್ತಿರುವ ಜತೆಗೆ ಚಿಕಿತ್ಸಾ ವೆಚ್ಚವೂ ಗಗನಮುಖಿಯಾಗುತ್ತಿದೆ. ಹೀಗಾಗಿ ನಿಮ್ಮ ಜತೆಗೆ ಕುಟುಂಬದ ಸದಸ್ಯರು ಒಳಗೊಂಡಿರುವ ಆರೋಗ್ಯ ವಿಮೆ ಮಾಡಿಸುವತ್ತ ಗಮನ ಹರಿಸುವುದು ಅಗತ್ಯ. ಇದರಿಂದ ನೀವು ಅಥವಾ ಕುಟುಂಬದ ಸದಸ್ಯರು ಅನಾರೋಗ್ಯಕ್ಕೀಡಾದಾಗ ಆಸ್ಪತ್ರೆಯ ಖರ್ಚು ವೆಚ್ಚಗಳಿಗೆ ತಲೆ ಕೆಡಿಸಿಕೊಳ್ಳದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಉಳಿತಾಯವನ್ನು ವ್ಯಯಿಸಬೇಕಾದ, ಸಾಲಕ್ಕಾಗಿ ಇತರರ ಮುಂದೆ ಕೈಚಾಚಬೇಕಾದ ಅಗತ್ಯ ಕಂಡುಬರುವುದಿಲ್ಲ.

ಆರೋಗ್ಯ ವಿಮೆ ಮಾಡಿಸುವ ಮುನ್ನ ಗಮನಿಸಬೇಕಾದ ಅಂಶಗಳು

ಸೂಕ್ತ ಪ್ಲ್ಯಾನ್‌ ಆರಿಸಿ: ನೀವು ಆಯ್ದುಕೊಳ್ಳುವ ಪಾಲಿಸಿ ಆ್ಯಂಬುಲೆನ್ಸ್‌ ಶುಲ್ಕಗಳು, ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು, ಹೆರಿಗೆ ಪ್ರಯೋಜನಗಳು, ನಗದುರಹಿತ ಚಿಕಿತ್ಸೆ ಮತ್ತು ದೈನಂದಿನ ಆಸ್ಪತ್ರೆ ಶುಲ್ಕಗಳು ಸೇರಿದಂತೆ ವಿವಿಧ ವೈದ್ಯಕೀಯ ಪರಿಸ್ಥಿತಿಗಳನ್ನು ಒಳಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ನಿಮ್ಮ ಕುಟುಂಬಕ್ಕಾಗಿ ಪಾಲಿಸಿ ಖರೀದಿಸುತ್ತಿದ್ದರೆ, ಇದು ಪ್ರತಿಯೊಬ್ಬರ ಅಗತ್ಯಗಳಿಗೆ ಸರಿ ಹೊಂದುತ್ತದೆಯೇ ಎನ್ನುವುದನ್ನು ಪರಿಶೀಲಿಸಿ. ತುರ್ತು ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ವಿವಿಧ ಕಂಪನಿಗಳಲ್ಲಿ ಲಭ್ಯವಿರುವ ಪ್ಲ್ಯಾನ್‌ಗಳನ್ನು ಹೋಲಿಸಿ ನೋಡಿ ನಿಮಗೆ ಸೂಕ್ತವಾದುದನ್ನು ಆರಿಸಿ. ಇದು ಒಳಗೊಂಡಿರುವ ಷರತ್ತುಗಳನ್ನು ಅರ್ಥ ಮಾಡಿಕೊಳ್ಳಿ.

ಕುಟುಂಬ ಯೋಜನೆ ಆಯ್ಕೆ ಮಾಡುವಾಗ: ಕುಟುಂಬ ಸದಸ್ಯರಿಗಾಗಿ ನೀವು ಆರೋಗ್ಯ ವಿಮೆಯನ್ನು ಮಾಡಿಸುವುದಾದರೆ ಸುಲಭವಾಗಿ ಹೊಸ ಸದಸ್ಯರನ್ನು ಸೇರಿಸಬಹುದಾದ ಪ್ಲ್ಯಾನ್‌ ಅನ್ನು ಆರಿಸಿ.

ಕಾಯುವ ಅವಧಿ: ಆರೋಗ್ಯ ವಿಮಾ ಪಾಲಿಸಿಗಳು ಸಾಮಾನ್ಯವಾಗಿ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆ, ಹೆರಿಗೆ ಪ್ರಯೋಜನಗಳು ಅಥವಾ ಕೆಲವು ಚಿಕಿತ್ಸೆಗಳಂತಹ ನಿರ್ದಿಷ್ಟ ವಿಚಾರಗಳಿಗೆ ಕಾಯುವ ಅವಧಿ ಹೊಂದಿರುತ್ತವೆ. ಈ ಕಾಯುವ ಸಮಯವು ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ. ಇವುಗಳನ್ನು ಕೇಳಿ ತಿಳಿದುಕೊಳ್ಳಿ. ಸಾಧ್ಯವಾದರೆ ಕಡಿಮೆ ಕಾಯುವ ಅವಧಿ ಹೊಂದಿರುವ ಯೋಜನೆಯನ್ನು ಆರಿಸಿ.

ನವೀಕರಣದ ಆಯ್ಕೆ: ಯೋಜನೆಯು ಜೀವಮಾನದ ನವೀಕರಣವನ್ನು(Lifetime renewability) ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನಿಮಗೆ ವಯಸ್ಸಾದಂತೆ ಹೆಚ್ಚಿನ ವೆಚ್ಚದ ಹೊಸ ಪ್ಲ್ಯಾನ್‌ ಖರೀದಿಸದೆ ಅಸ್ತಿತ್ವದಲ್ಲಿ ಇರುವ ಪಾಲಿಸಿಯನ್ನು ನವೀಕರಿಸಬಹುದು.

ಕೊಠಡಿ ಬಾಡಿಗೆ ಮಿತಿ: ನಿಮ್ಮ ಆರೋಗ್ಯ ವಿಮಾ ಯೋಜನೆಯು ಆಸ್ಪತ್ರೆಗೆ ದಾಖಲಾದಾಗ ನೀವು ಬಳಸಬಹುದಾದ ವಾರ್ಡ್‌ ಪ್ರಕಾರವನ್ನು ಒಳಗೊಂಡಿರುತ್ತದೆ. ಇದರತ್ತ ಗಮನ ಹರಿಸಿ. ಉದಾಹರಣೆಗೆ ಖಾಸಗಿ, ಅರೆ ಖಾಸಗಿ ಅಥವಾ ಜನರಲ್‌ ವಾರ್ಡ್‌. ನೀವು ಹೆಚ್ಚಿನ ಗೌಪ್ಯತೆಯನ್ನು ಬಯಸಿದರೆ ನಿಮ್ಮ ಹೆಚ್ಚುವರಿ ಪಾವತಿ ಮಾಡಬೇಕಾಬಹುದು. ಇದನ್ನು ತಪ್ಪಿಸಲು ಕೊಠಡಿ ಬಾಡಿಗೆ ಮಿತಿಯನ್ನು ಗಮನಿಸಿ.

ತೆರಿಗೆ ರಿಯಾಯಿತಿ: ಆರೋಗ್ಯ ವಿಮಾ ಪಾಲಿಸಿಯನ್ನು ಆಯ್ಕೆ ಮಾಡುವಾಗ, ಅದು ನೀಡುವ ತೆರಿಗೆ ರಿಯಾಯಿತಿ, ಅನುಕೂಲಗಳ ಬಗ್ಗೆ ಗಮನ ಹರಿಸಿ. ನೀವು ಪಾವತಿಸುವ ಪ್ರೀಮಿಯಂಗಳ ಮೇಲೆ ತೆರಿಗೆ ರಿಯಾಯಿತಿ ಪಡೆಯಲು ಸಾಧ್ಯವಿದೆ. ಇದು ನಿಮ್ಮ ಪಾಲಿಸಿ ಪ್ರಕಾರದ ಆಧಾರದ ಮೇಲೆ 25,000 ರೂ.ಗಳಿಂದ 75,000 ರೂ.ಗಳವರೆಗೆ ಲಭ್ಯ.