ನವದೆಹಲಿ: ವಿದ್ಯಾರ್ಥಿಗಳ (10 ಮತ್ತು 12ನೇ ತರಗತಿ) ಪರೀಕ್ಷಾ ಶುಲ್ಕ ಮನ್ನಾ ಮಾಡುವಂತೆ ಕೋರಿ ‘ಸೋಷಿಯಲ್ ಜ್ಯೂರಿಸ್ಟ್’ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕೋವಿಡ್‌ನಿಂದಾಗಿ ಕೆಲ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷಾ ಶುಲ್ಕ ಕಟ್ಟುವುದು ಕಷ್ಟ. ಹೀಗಾಗಿ, ಶುಲ್ಕದಿಂದ ವಿನಾಯಿತಿ ನೀಡಬೇಕೆಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಹಾಗೂ ದೆಹಲಿ ಸರ್ಕಾರಕ್ಕೆ ಸೂಚಿಸಬೇಕೆಂದು ‘ಸೋಷಿಯಲ್ ಜ್ಯೂರಿಸ್ಟ್’ ಸಂಸ್ಥೆ ಮನವಿ ಮಾಡಿತ್ತು.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಶ್ ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿತು.
‘ಶುಲ್ಕದಿಂದ ವಿನಾಯಿತಿ ನೀಡಿ ಎಂದು ನ್ಯಾಯಾಲಯವು ಆಡಳಿತಾರೂಢ ಸರ್ಕಾರಕ್ಕೆ ನಿರ್ದೇಶನ ನೀಡುವುದಾದರೂ ಹೇಗೆ’ ಎಂದು ಪೀಠವು ಕೇಳಿತು.