Thursday, 12th December 2024

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ: ಇಂದು ಸಂಜೆ ಪ್ರಧಾನಿ ಮಹತ್ವದ ಸಭೆ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವಾಲಯದ ಅಧಿಕಾರಿಗಳೊಂದಿಗೆ ಭದ್ರತಾ ಸಮಸ್ಯೆ ಮತ್ತು ಆರ್ಥಿಕ ಪರಿಣಾಮಗಳ ಕುರಿತು ಚರ್ಚಿಸಲು ಮಹತ್ವದ ಸಭೆ ನಡೆಸಲಿದ್ದಾರೆನ್ನಲಾಗಿದೆ.

ಏರುತ್ತಿರುವ ಕಚ್ಚಾ ತೈಲ ಬೆಲೆಯ ಪರಿಣಾಮ ತಗ್ಗಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾದ ಪಡೆಗಳು ಉಕ್ರೇನ್‌ನ ಹಲವಾರು ನಗರಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದವು. ಅಧ್ಯಕ್ಷ ಪುಟಿನ್ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಅಧಿಕೃತಗೊಳಿಸಿದ ನಂತರ ಕರಾವಳಿಯಲ್ಲಿ ಮಿಲಿಟರಿ ಪಡೆಗಳನ್ನು ನಿಯೋಜಿಸಿದವು.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ‘ಆಕ್ರಮಣ’ ಯುರೋಪಿನಲ್ಲಿ ‘ದೊಡ್ಡ ಯುದ್ಧ’ ದ ಆರಂಭ ವಾಗಿದೆ ಎಂದು ಹೇಳಿದರು. ಈ ಮಧ್ಯೆ, ಉಕ್ರೇನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಏರ್ಪಡಿಸಲಾಗಿದ್ದ ವಿಶೇಷ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.

ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಿದ ಕಾರಣ ಏರ್ ಇಂಡಿಯಾ ವಿಮಾನವು ಹಿಂತಿರುಗಿದ ನಂತರ ಉಕ್ರೇನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ಈಗ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.