ನವದೆಹಲಿ: ತಮ್ಮ 78ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಟೋಕಿಯೋ ಒಲಂಪಿಕ್ಸ್ ತಯಾರಿ ಹಾಗೂ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯ ಕೋರಿದ್ದಾರೆ.
ಕ್ರೀಡಾ ಸ್ಪೂರ್ತಿಯಿಂದ ಉತ್ತಮ ಆಟಗಾರನಾಗಬಹುದು. ಹಳ್ಳಿಗಳಿಂದ ಅನೇಕ ಆಟಗಾರರು ಒಲಂಪಿಕ್’ಗೆ ಬರುತ್ತಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರವೀಣ್ ಜಾಧವ್ ಅತ್ಯುತ್ತಮ ಬಿಲ್ಲುಗಾರ. ಅವರ ಪೋಷಕರು ಕಾರ್ಮಿಕರಾರಿ ಕೆಲಸ ಮಾಡುತ್ತಾರೆ. ಈಗ ಜಾಧವ್ ಟೋಕಿಯೋದಲ್ಲಿ ತಮ್ಮ ಮೊದಲ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದ್ದಾರೆ.
ಟೋಕಿಯೋಗೆ ಹೋಗುವ ಪ್ರತಿಯೊಬ್ಬ ಆಟಗಾರನೂ ಕೂಡ ಸ್ವಂತ ಹೋರಾಟ ಮತ್ತು ಅನೇಕ ವರ್ಷಗಳ ಶ್ರಮವನ್ನು ಹೊಂದಿದ್ದಾರೆ. ಅವರು ತಮಗಾಗಿ ಮಾತ್ರವಲ್ಲದೇ ದೇಶಕ್ಕಾಗಿ ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಒಲಂಪಿಕ್ಸ್ ಬಗ್ಗೆ ಸಮಗ್ರ ಮಾಹಿತಿ ಇರುವ ವೆಬ್’ಸೈಟ್’ನ್ನು ಆರಂಭಿಸಿರುವುದಾಗಿ ಮಾಹಿತಿ ನೀಡಿದ ಅವರು, ರೋಡ್ ಟು ಟೋಕಿಯೋ ಕ್ವಿಜ್ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಕರೋನಾ ಸಂಬಂಧಿತ ಸಮಸ್ಯೆಯಿಂದಾಗಿ ಇಹಲೋಕ ತ್ಯಜಿಸಿದ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರಿಗೆ ಇದೇ ವೇಳೆ ಪ್ರಧಾನಿ ಮೋದಿಯವರು ಗೌರವ ಸಲ್ಲಿಸಿದರು.