Friday, 22nd November 2024

PM Modi Birthday: 800 ಕೆಜಿ ಧಾನ್ಯದಲ್ಲಿ ಅರಳಿದ ಮೋದಿ ಚಿತ್ರ; 13 ವರ್ಷದ ಬಾಲಕಿ ಸಾಧನೆಗೆ ವಿಶ್ವ ದಾಖಲೆ ಗರಿ

PM Modi Birthday

ಚೆನ್ನೈ: ನಾಳೆ (ಸೆಪ್ಟೆಂಬರ್‌ 17) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ (PM Modi Birthday). ಈ ಹಿನ್ನೆಲೆಯಲ್ಲಿ ತಮಿಳುನಾಡಿದ 13 ವರ್ಷದ ಬಾಲಕಿಯೊಬ್ಬಳು ಸುಮಾರು 800 ಕೆಜಿ ಧಾನ್ಯ ಬಳಸಿ 12 ಗಂಟೆಗಳ ಶ್ರಮದ ಬಳಿಕ ಮೋದಿ ಅವರ ಬೃಹತ್‌ ಗಾತ್ರದ ಚಿತ್ರ ಬಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಚೆನ್ನೈಯ ವೆಲಮ್ಮಾಳ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಪ್ರೀಸ್ಲಿ ಶೆಕಿನಾ (Presley Shekinah) ಈ ಅಪರೂಪದ ದಾಖಲೆ ಬರೆದವಳು. ಸದ್ಯ ಆಕೆ ಚಿತ್ರ ಬಿಡಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ (Viral Video).

ಪ್ರೀಸ್ಲಿ ಶೆಕಿನಾ ಹೆತ್ತವರಾದ ಪ್ರತಾಪ್ ಸೆಲ್ವಂ ಮತ್ತು ಸಂಕೀರಾಣಿ ಅವರೊಂದಿಗೆ ಚೆನ್ನೈಯ ಕೊಲಪಕ್ಕಂನಲ್ಲಿ ವಾಸವಾಗಿದ್ದಾಳೆ. ಈಕೆ 800 ಕೆಜಿ ಧಾನ್ಯಗಳನ್ನು ಬಳಸಿ 600 ಚದರ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಚಿತ್ರವನ್ನು ಬಿಡಿಸಿದ್ದಾಳೆ. ಸತತ 12 ಗಂಟೆಗಳ ಕಠಿಣ ಪರಿಶ್ರಮದ ನಂತರ ತನ್ನ ಚಿತ್ರಕಲೆಯನ್ನು ಪೂರ್ಣಗೊಳಿಸಿದ್ದಾಳೆ. ಬೆಳಿಗ್ಗೆ 8.30ಕ್ಕೆ ಆರಂಭಿಸಿದ ಚಿತ್ರಕಲೆಯನ್ನು ಪೂರ್ಣಗೊಳಿಸಿದಾಗ ರಾತ್ರಿ 8.30 ಆಗಿತ್ತು.

ಪ್ರೀಸ್ಲಿಯ ಈ ಪರಿಶ್ರಮವನ್ನು ಯುಎನ್‌ಐಸಿಒ (UNICO) ವರ್ಲ್ಡ್ ರೆಕಾರ್ಡ್‌ ಗುರುತಿಸಿದೆ. ಇದನ್ನು ವಿದ್ಯಾರ್ಥಿ ಸಾಧನೆಯ ವಿಭಾಗದಲ್ಲಿ ನೋಂದಾಯಿಸಲಾಗಿದೆ. ಯುಎನ್‌ಐಸಿಒ ವಿಶ್ವ ದಾಖಲೆಗಳ ನಿರ್ದೇಶಕ ಆರ್. ಶಿವರಾಮನ್ ಅವರು ಪ್ರೀಸ್ಲಿಗೆ ಪ್ರಮಾಣಪತ್ರ ಮತ್ತು ಪದಕವನ್ನು ಹಸ್ತಾಂತರಿಸಿದ್ದಾರೆ. ಬಾಲಕಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಹೆತ್ತವರು ಹಾಗೂ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೆಟ್ರೋದಲ್ಲಿ ಪ್ರಯಾಣಿಸಿದ ಮೋದಿ

ಗಾಂಧಿನಗರ: ಸೋಮವಾರ (ಸೆಪ್ಟೆಂಬರ್‌ 16) ಗುಜರಾತ್‌ನ ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ 2ನೇ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ನಂತರ ಅವರು ಮೆಟ್ರೋದಲ್ಲಿ ಪ್ರಯಾಣಿಸಿದರು. ಸೆಕ್ಷನ್ 1 ಮೆಟ್ರೋ ನಿಲ್ದಾಣದಿಂದ ಗಿಫ್ಟ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಹೊಸದಾಗಿ ಪ್ರಾರಂಭಿಸಲಾದ ಮಾರ್ಗದಲ್ಲಿ ಸಂಚರಿಸಿದ ಮೋದಿ ಅವರೊಂದಿಗೆ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇದ್ದರು. ಮೆಟ್ರೋ ಪ್ರಯಾಣದ ಸಮಯದಲ್ಲಿ ಮೋದಿ ಯುವಜನತೆ, ಪ್ರಯಾಣಿಕರೊಂದಿಗೆ ಸಂವಹನ ನಡೆಸಿದರು.

ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಎರಡನೇ ಹಂತವನ್ನು ಗುಜರಾತ್ ಮೆಟ್ರೋ ರೈಲು ನಿಗಮವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಮೆಟ್ರೋ ಯೋಜನೆ ಉದ್ಘಾಟಿಸುವುದರ ಜೊತೆಗೆ ಮೋದಿ ಭಾರತದ ಮೊದಲ ವಂದೇ ಮೆಟ್ರೋಗೆ ಚಾಲನೆ ನೀಡಿದ್ದಾರೆ. ಇದಕ್ಕೆ ʼನಮೋ ಭಾರತ್ ರ‍್ಯಾಪಿಡ್‌ ರೈಲುʼ ಎಂದು ಹೆಸರಿಡಲಾಗಿದ್ದು ಮಂಗಳವಾರ (ಸೆಪ್ಟೆಂಬರ್‌ 17) ಸಾರ್ವಜನಿಕ ಸೇವೆ ಲಭ್ಯವಾಗಲಿದೆ. 12 ಬೋಗಿಗಳ ಈ ರೈಲು ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿರುವ ಭುಜ್‌ ಅನ್ನು ರಾಜ್ಯದ ಪ್ರಮುಖ ನಗರವಾದ ಅಹಮದಾಬಾದ್‌ನೊಂದಿಗೆ ಸಂಪರ್ಕಿಸುತ್ತದೆ. 359 ಕಿ.ಮೀ. ಅನ್ನು 5.45 ಗಂಟೆಗಳಲ್ಲಿ ಕ್ರಮಿಸಲು ಸಾಧ್ಯವಾಗಲಿದೆ. ಪ್ರಯಾಣದ ವೇಳೆ ಒಟ್ಟು 9 ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Narendra Modi Birthday: ಮೋದಿ ಜನ್ಮದಿನ; ಬಿಜೆಪಿಯಿಂದ ಚಿತ್ರಕಲಾ, ರಂಗೋಲಿ ಶಿಬಿರ