ನವದೆಹಲಿ: ದೇಶಿ ನಿರ್ಮಿತ ಎರಡು ಕೊರೊನಾ ವಿರುದ್ಧದ ಲಸಿಕೆಗಳು ತುರ್ತು ಸಂದರ್ಭದ ಬಳಕೆಗೆ ಅನುಮತಿ ಪಡೆದ ಬೆನ್ನಲ್ಲೇ ಅಭಿನಂದನೆಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಸೋಂಕಿನ ವಿರುದ್ಧದ ಹೋರಾಟಕ್ಕೆ ಉತ್ಸಾಹ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(DCGI) ಸೆರಮ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ರೂಪಿಸಿರುವ ಎರಡು ಲಸಿಕೆ ಗಳನ್ನು ತುರ್ತು ಬಳಕೆಗೆ ಅನುಮತಿ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ಇದು ಅತ್ಯಂತ ದೊಡ್ಡ ಮೈಲಿಗಲ್ಲು. ಕೊರೊನಾ ಮುಕ್ತ ಭಾರತ ನಿರ್ಮಾಣಕ್ಕೂ ಬುನಾದಿಯಾಗಲಿದೆ. ಆತ್ಮ ನಿರ್ಭರ್ ಯೋಜನೆಯಡಿ ಲಸಿಕೆಯನ್ನು ತಯಾರಿಸಿಕೊಂಡಿರುವ ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವ ಸಂದರ್ಭ. ಎರಡು ಲಸಿಕೆಗಳು ಅನುಮತಿ ಪಡೆ ದಿವೆ. ನಮ್ಮ ಭಾರತೀಯ ವಿಜ್ಞಾನಿಗಳು ಕೋಟ್ಯಂತರ ಜನರ ಕನಸು ನನಸು ಮಾಡಿದ್ದಾರೆ.
ಆತ್ಮ ನಿರ್ಭರ್ ಭಾರತ್ ಪ್ರಯತ್ನ ಫಲ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಲಸಿಕೆ ತಯಾರಿಕೆ ವೇಳೆ ಕಠಿಣ ಪರಿಶ್ರಮಪಟ್ಟ ವಿಜ್ಞಾನಿಗಳು, ಸಂಶೋಧಕರು ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೆಪೊಲೀಸರು ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಎಲ್ಲ ಮುಂಚೂಣಿ ಹೋರಾಟಗಾರರನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.