Friday, 22nd November 2024

PM Modi : ಹೆಜ್ಬುಲ್ಲಾ ದಮನದ ಬೆನ್ನಿಗೇ ಇಸ್ರೇಲ್ ಪ್ರಧಾನಿಗೆ ಮೋದಿ ಫೋನ್ ಕಾಲ್! ಮಾತುಕತೆಯ ಸಾರವೇನು?

PM Modi

ನವದೆಹಲಿ: ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಹಾಗೂ ಪ್ರಕ್ಷುಬ್ಧ ಪರಿಸ್ಥಿತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಸ್ರೇಲ್‌ ಪ್ರಧಾನಿ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆ ಮಾತುಕತೆ ನಡೆಸಿದ್ದಾರೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ವಿರುದ್ಧ ಇಸ್ರೇಲ್‌ ಸಮರ ಸಾರಿರುವ ಕಾರಣ ಪ್ರಧಾನಿ ಮೋದಿ ಮಾತನಾಡಿದ ಜಾಗತಿಕ ಶಾಂತಿಯ ಕುರಿತು ಚರ್ಚಿಸಿದರು.

ನೆತನ್ಯಾಹು ಅವರೊಂದಿಗಿನ ಸಂಭಾಷಣೆಯ ವಿವರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಅವರು ಸೋಶಿಯಲ್ ಮೀಡಿಯಾಗಳ ಮೂಲಕ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. “ಪ್ರಾದೇಶಿಕ ಉದ್ವಿಗ್ನ ಸ್ಥಿತಿಯನ್ನು ತಡೆಗಟ್ಟುವುದು ಮತ್ತು ಎಲ್ಲಾ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಬದ್” ಎಂದು ಪ್ರಧಾನಿ ಮೋದಿ ಹೇಳಿದರು.

ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗಿದೆ. ಹಮಾಸ್ ಬಂದೂಕುಧಾರಿಗಳು ಗಾಜಾದಲ್ಲಿ ಸೃಷ್ಟಿಸಿದ ಉಪಟಳದ ಬಳಿಕ ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ಆರಂಭಗೊಂಡಿತ್ತು. ನಂತರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿಗಳು ಮುಂದುವರಿದಿದ್ದವು ಇಸ್ರೇಲ್‌ನ ದಾಳಿಯು ಹಮಾಸ್‌ಗೆ ಗಮನಾರ್ಹ ಪೆಟ್ಟು ಕೊಟ್ಟಿತ್ತು. ಇದೇ ವೇಳೆ ಇರಾನ್ ಬೆಂಬಲಿತ ಹೆಜ್ಬುಲ್ಲಾ ಇಸ್ರೇಲ್ ವಿರುದ್ಧ ಕಾಲು ಕೆದರಿಕೊಂಡು ಜಗಳಕ್ಕೆ ನಿಂತಿತು. ಅಂತಿಮವಾಗಿ ಹೆಜ್ಬುಲ್ಲಾದ ಹಲವಾರು ನಾಯಕರನ್ನು ಇಸ್ರೇಲ್ ವಾಯುಪಡೆಯು ಹತ್ಯೆ ಮಾಡಿದೆ.

ಇದನ್ನೂ ಓದಿ: Mann Ki Baat: ‘ಮನ್‌ ಕೀ ಬಾತ್‌’ಗೆ ದಶಕದ ಸಂಭ್ರಮ; ಪ್ರಧಾನಿ ಮೋದಿ ಭಾವುಕ; ಕಾರ್ಯಕ್ರಮದ ಹೈಲೈಟ್ಸ್‌ ಇಲ್ಲಿದೆ

ಉತ್ತರ ಇಸ್ರೇಲ್ ಮತ್ತು ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ಗೆ ಹಿಜ್ಬುಲ್ಲಾ 8,000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿದೆ. ಈ ಗುಂಪು ಶಸ್ತ್ರಸಜ್ಜಿತ ವಾಹನಗಳ ಮೇಲೆ ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಹಾರಿಸಿದೆ. ಸ್ಫೋಟಕ ಡ್ರೋನ್‌ಗಳ ಮೂಲಕ ಮಿಲಿಟರಿ ಕೇಂದ್ರಗಳ ಮೇಲೆ ದಾಳಿ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆಗಳು ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ನಿರಂತರ ವೈಮಾನಿಕ ದಾಳಿ, ಟ್ಯಾಂಕ್‌ಗಳು ಮತ್ತು ಫಿರಂಗಿ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಂಡಿವೆ.