Friday, 20th September 2024

PM Narendra Modi: ಚೀಫ್ ಜಸ್ಟಿಸ್ ಜೊತೆ ಮನಮೋಹನ್ ಸಿಂಗ್ ಇಫ್ತಾರ್ ಕೂಟ ಮಾಡಬಹುದು, ಮೋದಿ ಹೋಗಬಾರದೆ? ಬಿಜೆಪಿ ಪ್ರಶ್ನೆ

manmohan singh

ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಾಧೀಶ ಜಸ್ಟಿಸ್ ಚಂದ್ರಚೂಡ (CJI DY Chandrachud) ಅವರ ಮನೆಯಲ್ಲಿ ನಡೆದ ಗಣೇಶ ಹಬ್ಬದ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾಗಿಯಾಗಿರುವುದನ್ನು ವಿಪಕ್ಷಗಳು ಟೀಕಿಸುತ್ತಿರುವ ಬೆನ್ನಲ್ಲಿಯೇ, ಬಿಜೆಪಿ ಬಲವಾದ ವಾದದ ಮೂಲಕ ಅದನ್ನು ಎದುರಿಸಿದೆ. ಮನಮೋಹನ್ ಸಿಂಗ್ (Manmohan Singh) ಅವರು ಪ್ರಧಾನಿಯಾಗಿದ್ದಾಗ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಇಫ್ತಾರ್‌ ಕೂಟ ನಡೆಸಿದ್ದುದನ್ನು ನೆನಪಿಸಿದೆ.

ಈ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಫ್ತಾರ್ ಕೂಟ ಆಯೋಜಿಸಿದ್ದರು. ಅದಕ್ಕೆ ಅಂದು ಮುಖ್ಯನ್ಯಾಯಮೂರ್ತಿಗಳಾಗಿದ್ದ ಜಸ್ಟಿಸ್ ಬಾಲಕೃಷ್ಣನ್ ಆಗಮಿಸಿದ್ದರು. ಆ ಫೋಟೋವನ್ನು ಇದೀಗ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಟ್ರೆಂಡ್‌ ಆಗುತ್ತಿದೆ.

“ಮನಮೋಹನ್ ಸಿಂಗ್ ಇಫ್ತಾರ್ ಪಾರ್ಟಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಭಾಗಿಯಾಗಬಹುದು. ಆದರೆ ಪ್ರಧಾನಿ ಮೋದಿ ಮಾತ್ರ ಮುಖ್ಯ ನ್ಯಾಯಮೂರ್ತಿಗಳ ಜೊತೆ ಗಣೇಶ ಹಬ್ಬ ಮಾಡಬಾರದಾ?” ಎಂದು ಪ್ರಶ್ನೆ ಮಾಡಿದ್ದಾರೆ. “ಗಣೇಶ ಹಬ್ಬ ಮಾಡಿದರೆ ಮಾತ್ರ ಜಾತ್ಯತೀತ ತತ್ವಕ್ಕೆ ಧಕ್ಕೆಯಾಗುತ್ತದೆಯೇ” ಎಂದು ಟೀಕಿಸಿದ್ದಾರೆ.

ಮನಮೋಹನ್ ಸಿಂಗ್ ಹಾಗೂ ಮುಖ್ಯ ನ್ಯಾಯಮೂರ್ತಿ ಆವತ್ತು ಸರ್ಕಾರದಿಂದಲೇ ಆಯೋಜನೆಯಾದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು. ಆದರೆ ಈಗ ಮೋದಿ ಭಾಗಿಯಾಗಿರುವುದು ಚಂದ್ರಚೂಡ್ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ. ಇದು ಖಾಸಗಿ ಕಾರ್ಯಕ್ರಮ ಎಂದು ಕಾಂಗ್ರೆಸಿಗರು ಪ್ರತ್ಯುತ್ತರ ನೀಡಿದ್ದಾರೆ.

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಅವರು ಮನಮೋಹನ್ ಸಿಂಗ್- ಬಾಲಕೃಷ್ಣನ್ ನಗುತ್ತಿರುವ ಇಫ್ತಾರ್ ಕೂಟದ ಹಳೆಯ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. “ಆಗ ʼನ್ಯಾಯಾಂಗವು ಸುರಕ್ಷಿತವಾಗಿದೆʼ ಎಂದು ಪ್ರತಿಪಕ್ಷಗಳು ಭಾವಿಸಿದ್ದವು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಪೂಜೆಯಲ್ಲಿ ಭಾಗವಹಿಸಿದಾಗ ಇದ್ದಕ್ಕಿದ್ದಂತೆ, ʼನ್ಯಾಯಾಂಗ ರಾಜಿ ಮಾಡಿಕೊಂಡಿದೆʼ ಎಂದು ಭಾವಿಸುತ್ತಿದ್ದಾರೆ” ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರು, ಪ್ರತಿಪಕ್ಷಗಳು ಈ ಕಾರ್ಯಕ್ರಮವನ್ನು ರಾಜಕೀಯ ಮಾಡುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. “ಪ್ರಜಾಪ್ರಭುತ್ವದ ವಿವಿಧ ಸ್ತಂಭಗಳು ಒಮ್ಮುಖವಾಗಬೇಕಲ್ಲವೇ? ಅವು ಶತ್ರುಗಳಾಗಬೇಕೇ? ಪರಸ್ಪರ ಸೌಜನ್ಯ ತೋರಿಸಬಾರದೆ? ಕರ್ತವ್ಯದಲ್ಲಿರುವಾಗ ಮತ್ತು ಹೊರಗಿರುವಾಗ ವಿಭಿನ್ನ ನಡವಳಿಕೆಗಳನ್ನು ಹೊಂದಿರುವುದು ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ” ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಸಿಜೆಐ ಮೋದಿ ಅವರನ್ನು ಉತ್ಸವಕ್ಕೆ ಆಹ್ವಾನಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಆದರೆ ಈ ಫೋಟೋವನ್ನು ಸಾರ್ವಜನಿಕಗೊಳಿಸಿದ ಪ್ರಧಾನಿಯವರ ನಡೆಯು ತಪ್ಪು ಮತ್ತು ಅನಗತ್ಯ ಊಹಾಪೋಹಗಳಿಗೆ ಕಾರಣವಾಗಿದೆ ಎಂದಿದ್ದಾರೆ.

‘ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ, ಖಾಸಗಿ ಸಮಾರಂಭದ ಈ ಸಂಗತಿಯನ್ನು ತೋರಿಸಿ ಚಮತ್ಕಾರ ಮಾಡುವುದು ಪ್ರಧಾನಿಗೆ ಸೂಕ್ತ ಅನಿಸುವುದಿಲ್ಲ” ಎಂದಿದ್ದಾರೆ ಸಿಬಲ್.‌

ಇದನ್ನೂ ಓದಿ: PM Narendra Modi: ಸಿಜೆಐ ಚಂದ್ರಚೂಡ್‌ ಮನೆಯಲ್ಲಿ ಪ್ರಧಾನಿ ಮೋದಿ: ವಿಪಕ್ಷ ಟೀಕೆ, ಹೋದರೇನು ತಪ್ಪು ಎಂದ ಬಿಜೆಪಿ