Thursday, 21st November 2024

PM Narendra Modi: ಹಸಿರು ಗ್ರಹ ನಿರ್ಮಾಣಕ್ಕೆ ಬದ್ಧವಾಗಿದೆ ಭಾರತ: ಪ್ರಧಾನಿ ಮೋದಿ

PM Narendra Modi

ನವದೆಹಲಿ: ಸ್ವಚ್ಛ ಮತ್ತು ಹಸಿರು ಗ್ರಹ ನಿರ್ಮಾಣಕ್ಕೆ ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿಳಿಸಿದರು. ದೆಹಲಿಯಲ್ಲಿ ಹಸಿರು ಜಲಜನಕದ (ICGH-2024) ಎರಡನೇ ಆವೃತ್ತಿಯನ್ನು ವಿಡಿಯೋ ಸಂದೇಶ ನೀಡುವ ಮೂಲಕ ಉದ್ಘಾಟಿಸಿ, ಜಗತ್ತಿಗೆ ಹಸಿರು ಹೈಡ್ರೋಜನ್ ಅಗತ್ಯತೆ ಬಗ್ಗೆ ಸಂದೇಶ ಸಾರಿದರು. ಹಸಿರು ಜಲಜನಕಕ್ಕಾಗಿ ಭಾರತವನ್ನು ಜಾಗತಿಕ ಹಬ್ ಮಾಡುವ ದೃಷ್ಟಿಯನ್ನು ಅನಾವರಣಗೊಳಿಸಿದ ಪ್ರಧಾನಿ, ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ ಭಾರತ ನಾಯಕತ್ವ ವಹಿಸಲಿದೆ ಎಂದು ಹೇಳಿದರು.

ಹಸಿರು ಇಂಧನದಲ್ಲಿ ಭಾರತ ಅದ್ಭುತ ಪ್ರದರ್ಶನ

ಹಸಿರು ಇಂಧನ ಸಾಮರ್ಥ್ಯದಲ್ಲಿ ಜಗತ್ತನ್ನೇ ಬೆರಗುಗೊಳಿಸುವ ರೀತಿ ಭಾರತ ಅದ್ಭುತ ಪ್ರದರ್ಶನ ನೀಡುತ್ತಿದೆ. ಒಂದು ದಶಕದಲ್ಲಿ ಭಾರತದ ಪಳಯುಳಿಕೆಯೇತರ ಇಂಧನ ಸಾಮರ್ಥ್ಯ ಶೇ.300ರಷ್ಟು ಹೆಚ್ಚಾಗಿದೆ. ಅಲ್ಲದೇ, ನಮ್ಮ ಸೌರ ಶಕ್ತಿ ಸಾಮರ್ಥ್ಯವೂ ಶೇ.3000 ರಷ್ಟು ಅಸಾಮಾನ್ಯ ಬೆಳವಣಿಗೆ ಕಂಡಿದೆ ಎಂದು ಪ್ರಧಾನಿ ಮೋದಿ ಹೆಮ್ಮೆಯಿಂದ ಹೇಳಿದರು.

ಈ ಸುದ್ದಿಯನ್ನೂ ಓದಿ | PSI Exam: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ!

ಸುಸ್ಥಿರ ಇಂಧನದ ಉತ್ಪಾದನೆ, ಬಳಕೆ ಮತ್ತು ರಫ್ತು ಮಾಡುವಲ್ಲಿ ಭಾರತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಾಕಿಕೊಂಡಿದೆ. ದೃಢವಾದ, ಅತ್ಯಾಧುನಿಕ ಸಂಶೋಧನೆ, ಕಾರ್ಯತಂತ್ರ ಮತ್ತು ಅಂತರಾಷ್ಟ್ರೀಯ ಸಹಯೋಗದಲ್ಲಿ ಹಸಿರು ಹೈಡ್ರೋಜನ್ ಉದ್ಯಮವನ್ನು ಜಗತ್ತಿನಲ್ಲೇ ಮುಂಚೂಣಿಯಲ್ಲಿ ಮುನ್ನಡೆಸಲು ತಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಜಿ20 ರಾಷ್ಟ್ರಗಳಲ್ಲೇ ಭಾರತ ಮೊದಲು

ಪ್ಯಾರಿಸ್ ಒಪ್ಪಂದದ ಹಸಿರು ಇಂಧನ ಪೂರೈಸುವಲ್ಲಿ ಜಿ20 ರಾಷ್ಟ್ರಗಳ ಪೈಕಿ ಭಾರತವೇ ಮೊದಲಿದೆ. ಹಸಿರು ಇಂಧನ ಉತ್ಪಾದನೆ, ಬಳಕೆ ಮತ್ತು ರಫ್ತು ವಿಚಾರದಲ್ಲಿ ಭಾರತ ಹೊಸ ಮತ್ತು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಗಮನಹರಿಸಿದೆ. ಇದರ ಪರಿಣಾಮ ಗ್ರೀನ್ ಹೈಡ್ರೋಜನ್ ಒಂದು ಪ್ರಗತಿಯ ಹೆಜ್ಜೆಯಾಗಿದೆ ಎಂದು ಹೇಳಿದರು.

ಹಸಿರು ಹೈಡ್ರೋಜನ್ ಹೂಡಿಕೆ ಆಕರ್ಷಣೆ ಉದ್ಯಮ

ಹಸಿರು ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವಾಗಿಸುವ ಗುರಿ ಹೊಂದಿದ್ದೇವೆ. 2023ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಈ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಿರಿಸಿದ್ದು, ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಹಸಿರು ಹೈಡ್ರೋಜನ್ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ಅವರು ತಿಳಿಸಿದರು.

ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಹಸಿರು ಜಲಜನಕದಲ್ಲಿ ಜಾಗತಿಕವಾಗಿ ನಾಯಕನ ಸ್ಥಾನದತ್ತ ಸಾಗುತ್ತಿದೆ ಎಂದರು.

8 ಲಕ್ಷ ಕೋಟಿ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಶನ್ (NGHM) ಇಂಧನ ಸ್ವಾವಲಂಬನೆ ಮತ್ತು ಆರ್ಥಿಕ ಬೆಳವಣಿಗೆ ಖಾತ್ರಿಪಡಿಸಿದೆ. ₹ 8 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಈ ಮಿಶನ್ ಎಂದು ಹೇಳಿದರು.

ನೈಸರ್ಗಿಕ ಅನಿಲ ಆಮದು ಮತ್ತು ಅಮೋನಿಯಾದ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಿದ್ದು, ಈ ಮೂಲಕ ₹ 1 ಲಕ್ಷ ಕೋಟಿ ಉಳಿತಾಯಕ್ಕೆ ಪ್ರೇರಣೆ ನೀಡಿದೆ. ಹಸಿರು ಹೈಡ್ರೋಜನ್ $100 ಬಿಲಿಯನ್ ಹೂಡಿಕೆ ಮತ್ತು 2030ರ ವೇಳೆಗೆ 5 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಹೊಂದಿದೆ ಎಂದರು.

ಈ ಸುದ್ದಿಯನ್ನೂ ಓದಿ | Virat Kohli: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆಯಲು ಸಜ್ಜಾದ ಕಿಂಗ್‌ ಕೊಹ್ಲಿ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಎಸ್. ಪುರಿ ಮಾತನಾಡಿ, 2070ರ ವೇಳೆಗೆ ಹಸಿರು ಹೈಡ್ರೋಜನ್ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವಲ್ಲಿ ಭಾರತ ಬದ್ಧತೆ ಪ್ರದರ್ಶಿಸಲಿದೆ ಎಂದರು.

$100 ಶತಕೋಟಿ ಹೂಡಿಕೆ ಮತ್ತು 125 ಗಿಗಾ ವ್ಯಾಟ್‌ಗಳ ಹೊಸ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯದ ಅಭಿವೃದ್ಧಿಯ ಅಗತ್ಯವಿದೆ ಎಂದು ಅವರು ತಿಳಿಸಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಭೂಪಿಂದರ್ ಎಸ್. ಭಲ್ಲಾ ಮಾತನಾಡಿ, ಭಾರತದ ಶೂನ್ಯ CO2 ಹೊರಸೂಸುವಿಕೆ ಮತ್ತು ಶುದ್ಧ ಶಕ್ತಿಯ ಮೂಲವಾಗಿ ಗ್ರೀನ್ ಹೈಡ್ರೋಜನ್‌ನ ಪಾತ್ರ ಅನನ್ಯವಾಗಿದೆ ಎಂದರು.

ಭಾರತದಲ್ಲಿ ಹಸಿರು ಹೈಡ್ರೋಜನ್ ಬೇಡಿಕೆ ಗಣನಿಯವಾಗಲಿದೆ. 2050ರ ವೇಳೆಗೆ ವಾರ್ಷಿಕ 29 MMT ತಲುಪುವ ನಿರೀಕ್ಷೆಯಿದ್ದು, ಆ ನಿಟ್ಟಿನಲ್ಲಿ ಭಾರತ ದಾಪುಗಾಲು ಇಟ್ಟಿದೆ ಎಂದರು.

ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್ ಕೆ. ಸೂದ್ ಅವರು ಹಸಿರು ಹೈಡ್ರೋಜನ್ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ವೈಜ್ಞಾನಿಕ ಸಂಶೋಧನೆ ಪಾತ್ರದ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

ಈ ಸುದ್ದಿಯನ್ನೂ ಓದಿ | Afro-Asia Cup: ಒಂದೇ ತಂಡದಲ್ಲಿ ಆಡಲಿದ್ದಾರೆ ಭಾರತ-ಪಾಕ್‌ ಆಟಗಾರರು!

ಸಿಎಸ್‌ಐಆರ್‌ ಮಹಾ ನಿರ್ದೇಶಕ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿಎಸ್‌ಐಆರ್) ಕಾರ್ಯದರ್ಶಿ ಡಾ.ಎನ್. ಕಲೈಸೆಲ್ವಿ ಮತ್ತಿತರರು ಇದ್ದರು.