Saturday, 23rd November 2024

PM Narendra Modi: ಶೀಘ್ರದಲ್ಲೇ ಒಂದು ದೇಶ, ಒಂದು ಎಲೆಕ್ಷನ್‌ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿ-ಪ್ರಧಾನಿ ಮೋದಿ ಘೋಷಣೆ

PM Narendra Modi

ಅಹ್ಮದಾಬಾದ್‌: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕತಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಗುರುವಾರ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಶೀಘ್ರದಲ್ಲೇ ಒಂದು ದೇಶ, ಒಂದು ಎಲೆಕ್ಷನ್‌ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

ಒನ್ ನೇಷನ್, ಒನ್ ಎಲೆಕ್ಷನ್’ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದಿರುವ ಪ್ರಧಾನಿ ಮೋದಿ, ದೇಶದ ಎಲ್ಲಾ ಚುನಾವಣೆಗಳನ್ನು ಒಂದೇ ದಿನದಲ್ಲಿ ಅಥವಾ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ನಡೆಸುವ ಗುರಿಯನ್ನು ಹೊಂದಿರುವ ಕೇಂದ್ರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಮತ್ತು ಅದು ನಿಜವಾಗಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಈ ಪ್ರಸ್ತಾವನೆಯನ್ನು ಈ ವರ್ಷದ ಆರಂಭದಲ್ಲಿ ಕ್ಯಾಬಿನೆಟ್ ಅಂಗೀಕರಿಸಿತು ಮತ್ತು ಈ ವರ್ಷದ ನಂತರ ಸಂಸತ್ತಿನ ಚಳಿಗಾಲದ ಅಧಿವೇಶನದ ಮುಂದೆ ಮಂಡಿಸಲಾಗುವುದು. ನಾವು ಈಗ ‘ಒಂದು ರಾಷ್ಟ್ರ ಒಂದು ಚುನಾವಣೆ’ ನೀತಿ ಬಗ್ಗೆ ಕೆಲಸ ಮಾಡುತ್ತಿದ್ದೇವೆ, ಇದು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಭಾರತದ ಸಂಪನ್ಮೂಲಗಳ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಧಿಸುವಲ್ಲಿ ದೇಶವು ಹೊಸ ವೇಗವನ್ನು ಪಡೆಯುತ್ತದೆ. ಇನ್ನು ಏಕರೂಪ ನಾಗರಿಕ ಸಂಹಿತೆಯನ್ನೂ ಶೀಘ್ರದಲ್ಲೇ ಜಾರಿಗೊಳಿಸುತ್ತೇವೆ ಎಂದಿದ್ದಾರೆ.

ಆರ್ಟಿಕಲ್ 370 ಶಾಶ್ವತವಾಗಿ ಸಮಾಧಿ

2019ರಲ್ಲಿ ಆರ್ಟಿಕಲ್ 370 ರದ್ದತಿ ಬಗ್ಗೆ ಮಾತನಾಡಿದ ಪ್ರಧಾನಿ, ಅದನ್ನು “ಶಾಶ್ವತವಾಗಿ ಸಮಾಧಿ ಮಾಡಲಾಗಿದೆ” ಎಂದು ಹೇಳಿದರು. ಸಂವಿಧಾನವನ್ನು ಬೋಧಿಸುವವರೇ ಹೆಚ್ಚು ಅವಮಾನಿಸುತ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ದೇಶದಲ್ಲಿ ಒಂದೇ ಸಂವಿಧಾನ ಎಂಬ ಸಂಕಲ್ಪ ಈಡೇರಿದೆ ಎಂದರು. ದೇಶದಲ್ಲಿ ಕಳೆದ 10 ವರ್ಷಗಳ ಆಡಳಿತದಲ್ಲಿ ರಾಷ್ಟ್ರೀಯ ಭದ್ರತೆಗೆ ಹಲವಾರು ಬೆದರಿಕೆಗಳನ್ನು ತೆಗೆದುಹಾಕಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ದೇಶದ ಈಶಾನ್ಯ ಪ್ರದೇಶಗಳನ್ನು ಕಾಡುತ್ತಿರುವ ಸಮಸ್ಯೆಗಳನ್ನು “ಸಂವಾದ, ನಂಬಿಕೆ ಮತ್ತು ಅಭಿವೃದ್ಧಿ” ಮೂಲಕ ಮರುಪರಿಹಾರ ಮಾಡಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ:Ekta Diwas celebration: ದೇಶದೆಲ್ಲೆಡೆ ಏಕತಾ ದಿವಸ ಆಚರಣೆ; ಉಕ್ಕಿನ ಮನುಷ್ಯನಿಗೆ ಪ್ರಧಾನಿ ಮೋದಿಯಿಂದ ಗೌರವಾರ್ಪಣೆ