Tuesday, 5th November 2024

PM Narendra Modi: ಕೆನಡಾಗೆ ಪ್ರಧಾನಿ ಮೋದಿ ಎಚ್ಚರಿಕೆ; ಹಿಂದೂಗಳ ಮೇಲೆ ಖಲಿಸ್ತಾನಿಗಳ ದಾಳಿ ಬಳಿಕ ಫಸ್ಟ್‌ ರಿಯಾಕ್ಷನ್‌

PM Narendra Modi

ನವದೆಹಲಿ: ಕೆನಡಾದಲ್ಲಿ ಹಿಂದೂ ದೇಗುಲ(Hindu Devotees attacked)ಗಳ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ(Pro-Khalistani mob) ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಖಂಡನೆ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಅಧಿಕಾರಿಗಳನ್ನು ಬೆದರಿಸುವ ಹೇಡಿತನದ ಪ್ರಯತ್ನ ಎಂದು ಕರೆದಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, “ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರವು ಈ ದುಷ್ಕೃತ್ಯದ ವಿರುದ್ಧ ನ್ಯಾಯ ಸಮ್ಮತ ಕ್ರಮ ಕೈಗೊಳ್ಳುತ್ತದೆ ಮತ್ತು ಎತ್ತಿಹಿಡಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಭಾರತ ಸರ್ಕಾರವು ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳು ನಡೆಸಿದ ಹಿಂಸಾಚಾರದ ಕೃತ್ಯಗಳನ್ನು ಖಂಡಿಸುತ್ತದೆ. ಅಲ್ಲದೇ ಎಲ್ಲಾ ಹಿಂದೂ ದೇಗುಲ ಮತ್ತ ಎಲ್ಲಾ ಪೂಜಾ ಸ್ಥಳಗಳಿಗೆ ಭದ್ರತೆ ಒದಗಿಸಬೇಕೆಂದು ಎಂದು ವಿದೇಶಾಂಗ ಸಚಿವಾಲಯ ಒತ್ತಾಯಿಸಿದ ಕೆಲವೇ ಕೆಲವು ಗಂಟೆಗಳ ನಂತರ ಪ್ರಧಾನಿಯವರ ಸಾಮಾಜಿಕ ಮಾಧ್ಯಮ ಪೋಸ್ಟ್ ಬಂದಿದೆ.

ಏನಿದು ಘಟನೆ?

ಕೆನಡಾ(Canada)ದ ಬಾಪ್ಟನ್‌ನಲ್ಲಿರುವ ಹಿಂದೂ ದೇಗುಲದ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ಮಾಡಿದ್ದು, ಅಲ್ಲಿದ್ದ ಹಿಂದೂ ಭ‍‍ಕ್ತರ ಮೇಲೆ ಹಲ್ಲೆ ನಡೆಸಿದ್ದರು. ಇನ್ನು ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಇಲ್ಲಿ ಪೂಜೆಗೆ ಬಂದಿದ್ದ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ವಿಡಿಯೋದಲ್ಲಿ ಕೆಲವರು ಹಿಂದೂ ಸಭಾ ಮಂದಿರದ ಹೊರಗೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಕೆನಡಾದಲ್ಲಿರುವ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅವರು ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಸೋಮವಾರ ಬ್ರಾಂಪ್ಟನ್ ದೇವಾಲಯದಲ್ಲಿ ಹಿಂದೂ ಭಕ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದು, ದೇಶದಲ್ಲಿ ಹಿಂಸಾಚಾರವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಭಾನುವಾರ, ಹಿಂದೂ ಸಭಾ ಮಂದಿರದಲ್ಲಿ ಭಕ್ತರ ಗುಂಪನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: Khalistani attack : ಕೆನಡಾದಲ್ಲಿ ಹಿಂದೂಗಳೇ ಟಾರ್ಗೆಟ್‌? ಪೊಲೀಸರಿಂದಲೂ ನಡೀತಿದೆ ಭೀಕರ ಹಲ್ಲೆ-ಮತ್ತೊಂದು ಶಾಕಿಂಗ್‌ ವಿಡಿಯೋ ವೈರಲ್‌