Saturday, 23rd November 2024

PM Narendra Modi : ಜಾರ್ಖಂಡ್‌ನಲ್ಲಿ 660 ಕೋಟಿ ರೂ.ಗಳ ಯೋಜನೆಗಳನ್ನು ಅನಾವರಣಗೊಳಿಸಿದ ಮೋದಿ

PM Narendra Modi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾರ್ಖಂಡ್‌ನ ರಾಂಚಿಯಲ್ಲಿ 660 ಕೋಟಿ ರೂ.ಗಳ ಸರಣಿ ಅಭಿವೃದ್ಧಿ ಯೋಜನೆಗಳಿಗೆ ವರ್ಚುಯಲ್‌ ಆಗಿ ಚಾಲನೆ ನೀಡಿದರು. ಯೋಜನೆಯಡಿ ಅವರು ಅವರು ದಿಯೋಘರ್ ಜಿಲ್ಲೆಯ ಮಧುಪುರ್ ಬೈಪಾಸ್ ಮಾರ್ಗ ಮತ್ತು ಹಜಾರಿಬಾಗ್ ಟೌನ್ ಕೋಚಿಂಗ್ ಡಿಪೋಗೆ ಶಂಕುಸ್ಥಾಪನೆ ನೆರವೇರಿಸಿದರು.

ದೊಡ್ಡ ಬೊಂಡಾಮುಂಡಾ-ರಾಂಚಿ ಸಿಂಗಲ್ ಲೈನ್ ವಿಭಾಗದ ಭಾಗವಾಗಿರುವ ಕುರ್ಕುರಾ-ಕನರೋನ್ ರೈಲ್ವೆ ಮಾರ್ಗ ಮತ್ತು ರೂರ್ಕೆಲಾ-ಗೊಮೊಹ್ ಮಾರ್ಗದ ಡಬ್ಲಿಂಗ್‌ ಕಾಮಗಾರಿಯನ್ನು ಮೋದಿ ಉದ್ಘಾಟಿಸಿದರು. ಈ ಯೋಜನೆಗಳು ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿದೆ.

ವಸತಿ ಯೋಜನೆಗಳ ಮಂಜೂರಾತಿ ಪತ್ರ ವಿತರಣೆ

ಈ ಮೂಲಸೌಕರ್ಯ ಅಭಿವೃದ್ಧಿಗಳ ಜೊತೆಗೆ ಗ್ರಾಮೀಣ ಪ್ರದೇಶದ ಬಡವರಿಗೆ ಕೈಗೆಟುಕುವ ವಸತಿ ಒದಗಿಸುವ ಗುರಿ ಹೊಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ 32,000 ಫಲಾನುಭವಿಗಳಿಗೆ ಮೋದಿ ವರ್ಚುವಲ್ ಆಗಿ ಮಂಜೂರಾತಿ ಪತ್ರಗಳನ್ನು ವಿತರಿಸಿದರು.

ಮನೆಗಳ ನಿರ್ಮಾಣಕ್ಕಾಗಿ ಪ್ರಧಾನಿಯವರು ಮೊದಲ ಕಂತಿನ 32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು. ಅವರು ದೇಶದ ವಿವಿಧ ಭಾಗಗಳಲ್ಲಿ ಪಿಎಂಎವೈ-ಜಿಯ 46,000 ಫಲಾನುಭವಿಗಳಿಗೆ ಕೀಲಿಗಳನ್ನು ವರ್ಚುವಲ್ ಆಗಿ ಹಸ್ತಾಂತರಿಸಿದರು. ಜಾರ್ಖಂಡ್‌ನಲ್ಲಿ ಈ ಯೋಜನೆಯಡಿ 1,13,400 ಮನೆಗಳನ್ನು ಮಂಜೂರು ಮಾಡಲಾಗಿದೆ.

ಬಡವರಿಗೆ ಅನುಕೂಲ

ದಲಿತರು, ಮಹಿಳೆಯರು ಮತ್ತು ಯುವಕರು ಸೇರಿದಂತೆ ಸಮಾಝದ ಅಂಚಿನಲ್ಲಿರುವ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಮೋದಿ ಪುನರುಚ್ಚರಿಸಿದರು. ಈಗ ಕೇಂದ್ರದ ಆದ್ಯತೆ ಬುಡಕಟ್ಟು ಜನಾಂಗದವರು, ಬಡವರು, ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Arvind Kejriwal: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌

ಈ ಯೋಜನೆಗಳ ಪ್ರಾರಂಭವು ಜಾರ್ಖಂಡ್ ನ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ ಮೂಲಸೌಕರ್ಯಗಳ ವಿಷಯದಲ್ಲಿ ಹಿಂದುಳಿದಿರುವ ರಾಜ್ಯವು ತ್ವರಿತ ಪ್ರಗತಿಯನ್ನು ಕಾಣುತ್ತದೆ ಎಂದು ಹೇಳಿದರು.

ಈ ಪ್ರದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಈ ರೈಲು ಮತ್ತು ಮೂಲಸೌಕರ್ಯ ಯೋಜನೆಗಳ ಪರಿಣಾಮವನ್ನು ಮೋದಿ ಎತ್ತಿ ತೋರಿಸಿದರು. ಅವು ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದಕ್ಕಾಗಿ ಟಾಟಾನಗರದ ಜನರಲ್ಲಿ ಕ್ಷಮೆಯಾಚಿಸಿದ ಮೋದಿ, ಪ್ರತಿಕೂಲ ಹವಾಮಾನದಿಂದಾಗಿ ತಮ್ಮ ಹೆಲಿಕಾಪ್ಟರ್ ರಾಂಚಿಯಿಂದ ಹೊರಡಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.

ಇದಕ್ಕೂ ಮುನ್ನ, ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಆರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ವರ್ಚುವಲ್ ಹಸಿರು ನಿಶಾನೆ ತೋರಿದರು. ಟಾಟಾನಗರ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಅನ್ನಪೂರ್ಣ ದೇವಿ, ಸಂಜಯ್ ಸೇಠ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಭಾಗವಹಿಸಿದ್ದರು.