Friday, 22nd November 2024

PMs Internship Scheme: ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಜಾರಿ; ವರ್ಷಕ್ಕೆ 60,000 ರೂ. ಪಡೆಯುವ ಅವಕಾಶ!

PMs internship scheme

ಐದು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ಯುವಕರಿಗೆ ವಾರ್ಷಿಕವಾಗಿ 60,000 ರೂ. ಆರ್ಥಿಕ ನೆರವು (financial assistance) ನೀಡುವ ಪ್ರಧಾನಮಂತ್ರಿಯ ಇಂಟರ್ನ್‌ಶಿಪ್ ಯೋಜನೆಯನ್ನು (PMs internship scheme) ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಪ್ರಾಯೋಗಿಕ ಆಧಾರದ ಮೇಲೆ ಮೋದಿ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.

2024- 25ರಲ್ಲಿ ಪ್ರಾಯೋಗಿಕ ಯೋಜನೆಯ ಒಟ್ಟು ವೆಚ್ಚ ಸುಮಾರು 800 ಕೋಟಿ ರೂ. ಗಳಾಗಿದೆ. ಈ ಆರ್ಥಿಕ ವರ್ಷದಲ್ಲಿ 1.25 ಲಕ್ಷ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕೇಂದ್ರ ಬಜೆಟ್ 2024ರಲ್ಲಿ ಘೋಷಿಸಲಾಗಿದೆ ಪ್ರಸಿದ್ಧ ಕಂಪನಿಗಳಲ್ಲಿ ಪ್ರಧಾನಮಂತ್ರಿಗಳ ಇಂಟರ್ನ್‌ಶಿಪ್ ಯೋಜನೆಯಡಿಯಲ್ಲಿ ಇಂಟರ್ನ್‌ಗಳಿಗೆ ವಿಮಾ ರಕ್ಷಣೆಯನ್ನೂ ಕೂಡ ಒದಗಿಸಲಾಗುತ್ತದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅಭಿವೃದ್ಧಿಪಡಿಸಿದ ಆನ್‌ಲೈನ್ ಪೋರ್ಟಲ್ ಮೂಲಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಕಂಪನಿಗಳು ಪೋರ್ಟಲ್ ಮೂಲಕ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಬಹುದು. ಪೈಲಟ್ ಯೋಜನೆಗಾಗಿ ಉನ್ನತ ಕಂಪನಿಗಳನ್ನು ಕಳೆದ ಮೂರು ವರ್ಷಗಳಲ್ಲಿ ಅವರ ಸಿಎಸ್‌ಆರ್ (Corporate Social Responsibility) ವೆಚ್ಚದ ಸರಾಸರಿ ಆಧಾರದ ಮೇಲೆ ಗುರುತಿಸಲಾಗಿದೆ.

PMs internship scheme

ನೋಂದಣಿ ಯಾವಾಗ?

ಇಂಟರ್ನ್‌ಶಿಪ್ ಅವಕಾಶಗಳನ್ನು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ ಎರಡನೇ ವಾರದಿಂದ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಈ ಯೋಜನೆಯಲ್ಲಿ ಕಂಪನಿಗಳು ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು. ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಕಂಪನಿ, ಬ್ಯಾಂಕ್, ಹಣಕಾಸು ಸಂಸ್ಥೆಗಳು ಸಚಿವಾಲಯದ ಅನುಮೋದನೆ ಪಡೆಯಬೇಕು. ಅಭ್ಯರ್ಥಿಗಳಿಗೆ ಒಟ್ಟು 12 ತಿಂಗಳವರೆಗೆ ಇಂಟರ್ನ್‌ಶಿಪ್ ನೀಡಲಾಗುವುದು. ಇದರಲ್ಲಿ ಕನಿಷ್ಠ ಅರ್ಧದಷ್ಟು ಅವಧಿಯನ್ನು ಕೆಲಸದ ವಾತಾವರಣದಲ್ಲಿ ಕಳೆಯಬೇಕು ಮತ್ತು ತರಗತಿಯಲ್ಲಿ ಅಲ್ಲ.

ಇಂಟರ್ನಿಗಳಿಗೆ ಪಾವತಿ ಹೇಗೆ?

ಇಂಟರ್ನಿಗಳಿಗೆ ತಿಂಗಳಿಗೆ 5,000 ರೂ. ಆರ್ಥಿಕ ನೆರವು ನೀಡಲಾಗುವುದು. ಒಟ್ಟು ಮೊತ್ತದಲ್ಲಿ 4,500 ರೂ. ಅನ್ನು ಸರ್ಕಾರ ಮತ್ತು 500 ರೂ. ಅನ್ನು ಕಂಪನಿಯು ತನ್ನ ಸಿ ಎಸ್‌ ಆರ್ ನಿಧಿಯಿಂದ ಪಾವತಿಸುತ್ತದೆ.

ಇಂಟರ್ನ್‌ಶಿಪ್ ಗೆ ಸೇರಿದ ಅನಂತರ ಪ್ರತಿ ಇಂಟರ್ನಿಗೆ 6,000 ರೂ. ಒಂದು ಬಾರಿ ಅನುದಾನವನ್ನು ಸಚಿವಾಲಯವು ವಿತರಿಸುತ್ತದೆ. ಇಂಟರ್ನಿಗಳ ತರಬೇತಿಗೆ ಸಂಬಂಧಿಸಿದ ವೆಚ್ಚಗಳನ್ನು ಕಂಪನಿಯು ತನ್ನ ಸಿಎಸ್‌ಆರ್ ನಿಧಿಯಿಂದ ಭರಿಸಲಿದೆ.

ವಿಮಾ ರಕ್ಷಣೆ

ಕೇಂದ್ರ ಸರ್ಕಾರದ ವಿಮಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ಅಡಿಯಲ್ಲಿ ಪ್ರತಿಯೊಬ್ಬ ಇಂಟರ್ನಿಗೆ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಭರಿಸಲಿದೆ.

PMs internship scheme

ಯಾರು ಅರ್ಹರು?

ಈ ಯೋಜನೆಯಲ್ಲಿ ಪಾಲ್ಗೊಳ್ಳುವವರಿಗೆ ಹಲವು ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ಮುಖ್ಯವಾಗಿ 21ರಿಂದ 24 ವರ್ಷ ವಯಸ್ಸಿನ ಯುವಕರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇಂಟರ್ನ್‌ಶಿಪ್ ಕಾರ್ಯಕ್ರಮವು ಡಿಸೆಂಬರ್ 2ರಂದು ಪ್ರಾರಂಭವಾಗಲಿದೆ ಎನ್ನಲಾಗಿದೆ.

ಆನ್‌ಲೈನ್, ದೂರಶಿಕ್ಷಣ ಕಾರ್ಯಕ್ರಮಗಳಲ್ಲಿ ದಾಖಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹೈಸ್ಕೂಲ್, ಪಿಯುಸಿ, ಉತ್ತೀರ್ಣರಾದ ಅಭ್ಯರ್ಥಿಗಳು, ಐಟಿಐಯಿಂದ ಪ್ರಮಾಣಪತ್ರ ಹೊಂದಿರುವವರು, ಪಾಲಿಟೆಕ್ನಿಕ್ ಇನ್ಸ್ ಟಿಟ್ಯೂಟ್‌ನಿಂದ ಡಿಪ್ಲೊಮಾ ಪಡೆದಿರುವವರು ಅಥವಾ ಬಿಎ, ಬಿಎಸ್ ಸಿ, ಬಿಕಾಂ, ಬಿಸಿಎ, ಬಿಬಿಎ, ಬಿ ಫಾರ್ಮನಂತಹ ಪದವೀಧರರು ಇದರಲ್ಲಿ ಪಾಲ್ಗೊಳ್ಳಬಹುದು.

Union Cabinet: ರೈಲ್ವೆ ನೌಕರರಿಗೆ ಗುಡ್‌ನ್ಯೂಸ್‌; ಬೋನಸ್‌ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ

ಪಾಲುದಾರ ಕಂಪನಿಗಳು ಪೋರ್ಟಲ್‌ನಲ್ಲಿ ಮೀಸಲಾದ ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತವೆ. ಅಲ್ಲಿ ಅವರು ಇಂಟರ್ನ್‌ಶಿಪ್ ಅವಕಾಶಗಳನ್ನು ಪೋಸ್ಟ್ ಮಾಡಿರುತ್ತಾರೆ. ಸ್ಥಳ, ಸ್ವರೂಪ, ಅಗತ್ಯವಿರುವ ಅರ್ಹತೆಗಳು ಮತ್ತು ಒದಗಿಸುವ ಸೌಲಭ್ಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿರುತ್ತದೆ.

ಅಭ್ಯರ್ಥಿಗಳು ತಮ್ಮ ಆದ್ಯತೆಯ ವಲಯಗಳನ್ನು ಗಮನಿಸಿ ನೋಂದಣಿ ಮಾಡಬಹುದು. ಏಕಕಾಲಕ್ಕೆ ಐದು ಅವಕಾಶಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.