Friday, 22nd November 2024

Rahul Gandhi: ರಾಹುಲ್ ಗಾಂಧಿ ಕುರಿತ ವಿವಾದಾತ್ಮಕ ಪೋಸ್ಟ್‌; ಒಡಿಶಾ ನಟನ ವಿರುದ್ಧ ದೂರು

Police Case Against Odisha Actor For Controversial Post On Rahul Gandhi

ಭುವನೇಶ್ವರ: ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ (Rahul Gandhi) ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ಒಡಿಯಾ ನಟ ಬುದ್ಧಾದಿತ್ಯ ಮೊಹಾಂತಿ (Buddhaditya Mohanty) ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (NSUI) ಪೊಲೀಸ್ ದೂರು ದಾಖಲಿಸಿದೆ.
ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷ ಉದಿತ್ ಪ್ರಧಾನ್ ಶುಕ್ರವಾರ ರಾಜಧಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಾಂತಿ ಪೋಸ್ಟ್ ಮಾಡಿದ್ದರ ವಿರುದ್ಧ ಕಿಡಿ ಕಾರಿದ್ದಾರೆ.

”ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಕೊಂದ ನಂತರ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಮುಂದಿನ ಗುರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯಾಗಿರಬೇಕು” ಎಂದು ಸೋಷಿಯಲ್‌ ಮೀಡಿಯಾದಲ್ಲಿ ಮೊಹಾಂತಿ ಪೋಸ್ಟ್ ಮಾಡಿದ್ದರು. ತದ ನಂತರ ಪೋಸ್ಟನ್ನು ಡಿಲಿಟ್ ಮಾಡಿದ್ದರು. ʼʼನಮ್ಮ ನಾಯಕನ ವಿರುದ್ಧ ಇಂತಹ ಹೇಳಿಕೆಯನ್ನು ನಾವು ಸಹಿಸುವುದಿಲ್ಲ” ಎಂದು ಉದಿತ್ ಪ್ರಧಾನ್ ಹೇಳಿದ್ದಾರೆ. ದೂರಿನ ಜತೆಗೆ ಸಾಸೋಷಿಯಲ್‌ ಮೀಡಿಯಾದ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ದೂರನ್ನು ಸ್ವೀಕರಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾವು ಮಾಡಿದ ತಪ್ಪಿಗೆ ಶುಕ್ರವಾರ ಕ್ಷಮೆಯಾಚಿಸಿ ಪೋಸ್ಟ್‌ ಮಾಡಿದ ಮೊಹಾಂತಿ, ʼʼರಾಹುಲ್ ಗಾಂಧಿಯ ಬಗ್ಗೆ ನನ್ನ ಕೊನೆಯ ಪೋಸ್ಟ್. ಎಂದಿಗೂ ಅವರನ್ನು ಗುರಿಯಾಗಿಸುವುದು, ಹಾನಿ ಮಾಡುವುದು, ಯಾವುದೇ ರೀತಿಯಲ್ಲಿ ಕೀಳಾಗಿಸುವುದು ಅಥವಾ ಅವರ ವಿರುದ್ಧ ಏನನ್ನೂ ಬರೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ನಾನು ಈ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Primary School Exam : ಈ ಬಾರಿಯೂ 5,8,9ನೇ ತರಗತಿಗೆ ಬೋರ್ಡ್‌ ಪರೀಕ್ಷೆ ಇಲ್ಲ; ಮೌಲ್ಯಾಂಕ ನಡೆಸಲು ಆದೇಶ

ಮುಂಬರುವ ವಯನಾಡು ಲೋಕಸಭಾ ಬೈ ಎಲೆಕ್ಷನ್‌ಗೆ ಭರ್ಜರಿ ತಯಾರಿ ನಡೆಸುತ್ತಿರುವ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ. ಕಳೆದ ಲೋಕಸಭಾ ಎಲೆಕ್ಷನ್‌ನಲ್ಲಿ ಉತ್ತರ ಪ್ರದೇಶದ ರಾಯಬರೇಲಿ ಹಾಗೂ ವಯನಾಡಿನಿಂದ ಸ್ಪರ್ಧೆ ಮಾಡಿದ್ದ ರಾಹುಲ್‌, ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್‌ನ ಭದ್ರ ಕೋಟೆಯಾದ ರಾಯ್‌ ಬರೇಲಿಯನ್ನು ಉಳಿಸಿಕೊಂಡು ವಯನಾಡಿಗೆ ಭಾವುಕ ವಿದಾಯ ಹೇಳಿದ್ದರು. ಕಳೆದ ಲೋಕಸಭಾ ಜೂನ್‌ನಲ್ಲಿ, ರಾಹುಲ್ ಗಾಂಧಿ ವಯನಾಡಿನಲ್ಲಿ ಗಮನಾರ್ಹವಾಗಿ ಚುನಾವಣೆಯಲ್ಲಿ ಗೆಲುವನ್ನ ಕಂಡಿದ್ದರು. ಸಿಪಿಐನ ಅನ್ನಿ ರಾಜಾ ಅವರನ್ನು 3,64,422 ಮತಗಳ ಅಂತರದಿಂದ ಸೋಲಿಸುವ ಮೂಲಕ ನಿರ್ಣಾಯಕ ವಿಜಯವನ್ನು ಗಳಿಸಿದ್ದರು. ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆದರೆ, ಅನ್ನಿ ರಾಜಾ 2,83,023 ಮತಗಳನ್ನು ಗಳಿಸಿದ್ದರು. ಬಿಜೆಪಿಯ ಕೆ.ಸುರೇಂದ್ರನ್ 1,41,045 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಇದೀಗ ರಾಹುಲ್‌ ಗಾಂಧಿ ರಾಜಿನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನವೆಂಬರ್‌ನಲ್ಲಿ ನಡೆಯಲಿದ್ದು, ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುವುದು ಬಹುತೇಕ ಖಚಿತಗೊಂಡಿದೆ. ಈಗಾಗಲೇ ನಾಮಿನೇಷನ್‌ ಪ್ರಕ್ರಿಯೆ ಕೂಡ ಶುರುವಾಗಿದ್ದು, ಚುನಾವಣೆಯ ರಂಗು ವಯನಾಡಿನಲ್ಲಿ ಜೋರಾಗಿದೆ.