ಸೂರತ್: ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೆರೆಯಾಗಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಪೊಲೀಸ್ ಕಸ್ಟಡಿಯಲ್ಲಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾನೆ (Police News) ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು ಆರೋಪಿ ಈ ಹಿಂದೆ ಕೊಲೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಿದ್ದಾರೆ. ಶಿವಶಂಕರ್ ಚೌರಾಸಿಯಾ (45) ಮತ್ತು ಮುನ್ನಾ ಪಾಸ್ವಾನ್ (40) ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬುಧವಾರ ಬಂಧಿಸಲಾಗಿತ್ತು. ಅವರಲ್ಲಿ ಚೌರಾಸಿಯ ಮೃತಪಟ್ಟಿದ್ದಾನೆ.
ಚೌರಾಸಿಯಾ ಅವರು ಮಧ್ಯಾಹ್ನ 2.00ರ ಸುಮಾರಿಗೆ ಉಸಿರಾಟದ ತೊಂದರೆ ಬಗ್ಗೆ ದೂರು ನೀಡಿದ್ದರು. ಅವರನ್ನು ಕಾಮ್ರೆಜ್ ಪ್ರದೇಶದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆ ಬಳಿಕ ನಿಧನ ಹೊಂದಿದ್ದಾರೆ ಎಂದು ಸೂರತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಜಾಯ್ಸರ್ ತಿಳಿಸಿದ್ದಾರೆ.
ಉಳಿದ ಆರೋಪಿ ಪಾಸ್ವಾನ್ ಅವರನ್ನು ರಿಮಾಂಡ್ ಮಾಡುವಂತೆ ಕೋರಿ ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಪೊಲೀಸರ ಪ್ರಕಾರ, ಪಾಸ್ವಾನ್, ಚೌರಾಸಿಯಾ ಮತ್ತು ಇನ್ನೂ ಪತ್ತೆಯಾಗದ ಮೂರನೇ ವ್ಯಕ್ತಿ ಮಂಗಳವಾರ ರಾತ್ರಿ ಮಂಗ್ರೋಲ್ ತಾಲ್ಲೂಕಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು.
ಬಾಲಕಿ ತನ್ನ ಕೋಚಿಂಗ್ ತರಗತಿಗೆ ಹಾಜರಾದ ನಂತರ ಸ್ನೇಹಿತನನ್ನು ಭೇಟಿಯಾಗಲು ಕಿಮ್ ಗ್ರಾಮಕ್ಕೆ ಹೋಗಿದ್ದಳು. ಬಳಿಕ ಸ್ನೇಹಿತನ ಜತೆ ಮೋಟಾ ಬೊರ್ಸಾರಾ ಗ್ರಾಮದ ಬಳಿಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್ ಗೆ ಹೋಗುತ್ತಿದ್ದಳು. ಬಳಿಕ ಸ್ನೇಹಿತನ ಜತೆ ನಿರ್ಜನ ಪ್ರದೇಶದಲ್ಲಿ ಕುಳಿತಿದ್ದಾಗ ಆರೋಪಿಗಳು ಸುತ್ತುವರಿದಿದ್ದರು.
ಇದನ್ನೂ ಓದಿ: Ratan Tata Death : ರತನ್ ಟಾಟಾಗೆ ನಮನ ಸಲ್ಲಿಸಿದ ಪ್ರೀತಿಯ ಶ್ವಾನ ‘ಗೋವಾ’, ಈ ನಾಯಿಯ ಕತೆಯೂ ಸ್ವಾರಸ್ಯಕರ
ಆಕೆಯ ಸ್ನೇಹಿತ ತಪ್ಪಿಸಿಕೊಂಡಾಗ ಮೂವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆ ಮತ್ತು ಅವಳ ಸ್ನೇಹಿತನ ಮೊಬೈಲ್ ಫೋನ್ ಎತ್ತಿಕೊಂಡು ಪರಾರಿಯಾಗಿದ್ದರು. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಪೋಕ್ಸೊ) ಕಾಯ್ದೆಯಡಿ ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಇತರ ಆರೋಪಗಳನ್ನು ದಾಖಲಿಸಿದ್ದರು.
ಪಾಸ್ವಾನ್ ಮತ್ತು ಚೌರಾಸಿಯಾ ಅವರನ್ನು ಬುಧವಾರ ಸಂಜೆ ಬಂಧಿಸಲಾಗಿತ್ತು. ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಪೊಲೀಸರು ಗುಂಡು ಹಾರಿಸಿದ್ದರು. ಆರೋಪಿಗಳಲ್ಲಿ ಇಬ್ಬರ ವಿರುದ್ಧ ಅಂಕಲೇಶ್ವರ, ಕಡೋದರ, ಅಮೀರ್ಗಡ್ ಮತ್ತು ಕರ್ಜನ್ ಮುಂತಾದ ಪ್ರದೇಶಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೌರಾಸಿಯಾ ವಿರುದ್ಧ 2017ರಲ್ಲಿ ಅಂಕಲೇಶ್ವರದಲ್ಲಿ ಕೊಲೆ ಪ್ರಕರಣ ಹಾಗೂ 2023ರಲ್ಲಿ ಕರ್ಜನ್ ನಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ವರ್ಷ, ಬನಸ್ಕಾಂತದ ಅಮೀರ್ಗಢ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.