Sunday, 15th December 2024

ಕೆಎಂಸಿ 144 ವಾರ್ಡ್‌ಗಳಲ್ಲಿ ಮತದಾನ ಆರಂಭ

#KMC

ಕೋಲ್ಕತ್ತಾ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ)ನ ಎಲ್ಲಾ 144 ವಾರ್ಡ್‌ಗಳಲ್ಲಿ ಭಾನುವಾರ ಮತದಾನ ಆರಂಭವಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬಿಗಿಯಾದ ಪೊಲೀಸ್ ಭದ್ರತಾ ವ್ಯವಸ್ಥೆಗಳ ನಡುವೆ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಮತದಾನ ಪ್ರಾರಂಭವಾಗಿದೆ. 4,959 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಜೊತೆಗೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಗರದಾದ್ಯಂತ ಸುಮಾರು 23,000 ಕೋಲ್ಕತ್ತಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈ ಬಾರಿ ಚುನಾ ವಣೆಗೆ ಮಹಾನಗರದ ವಿವಿಧ ಭಾಗಗಳಲ್ಲಿ ಮಾರ್ಗ ಮೆರವಣಿಗೆಗಳು ಮತ್ತು ಬಿರುಸಿನ ಪ್ರಚಾರ ನಡೆಸಲಾಗಿದೆ. ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಪೊಲೀಸ್ ಪಿಕೆಟ್‌ಗಳನ್ನು ಸಹ ಸ್ಥಾಪಿಸ ಲಾಗಿದೆ ಎಂದು ನಿಲಂಜನ್ ಸ್ಯಾಂಡಿಲ್ಯ ಅವರು ಹೇಳಿದ್ದಾರೆ.

ಕೋಲ್ಕತ್ತಾ ಪೊಲೀಸರು ನಗರ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ್ದಾರೆ, ಹೋಟೆಲ್‌ಗಳು ಮತ್ತು ವಿವಿಧ ಪ್ರವೇಶಗಳಲ್ಲಿ ಕಟ್ಟುನಿಟ್ಟಾದ ತಪಾಸಣೆಗಳನ್ನು ನಡೆಸಿದ್ದಾರೆ.

ಮತದಾನ ಪ್ರಾರಂಭವಾಗುವ ಗಂಟೆಗಳ ಮೊದಲು ನಗರದ ತಾರಾತಲಾ ಪ್ರದೇಶದಿಂದ ಒಂದು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಹೊಂದಿರುವ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಡವಾಗಿ ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿದ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಅವಧಿಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದು, ಬಿಜೆಪಿಯು ಸಿಪಿಐ (ಎಂ)ಯೊಂದಿಗೆ ಭರ್ಜರಿ ಪೈಪೋಟಿ ನಡೆಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹಾನಗರದ ಎಲ್ಲಾ 16 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಜಯಭೇರಿ ಬಾರಿಸಿತ್ತು. ಡಿಸೆಂಬರ್ 21 ರಂದು ಮತ ಎಣಿಕೆ ನಡೆಯಲಿದೆ.