Friday, 19th April 2024

ಜನಸಂಖ್ಯೆ 29 ಲಕ್ಷ ಹೆಚ್ಚಳ: ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಭಾರತವು ಇದೀಗ 142.86 ಕೋಟಿ ಜನರೊಂದಿಗೆ ಜನಸಂಖ್ಯೆಯಲ್ಲಿ ಚೀನಾ ವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಚೀನಾದ ಜನಸಂಖ್ಯೆ 142.57 ಕೋಟಿಯಾಗಿದ್ದರೆ, ಭಾರತದ ಜನಸಂಖ್ಯೆ ಅದಕ್ಕಿಂತ ತುಸು ಮೇಲಿದ್ದು, 142.866 ಕೋಟಿಗೆ ವೃದ್ಧಿಸಿದೆ. ಅಂದರೆ ಚೀನಾಕ್ಕಿಂತ 29 ಲಕ್ಷ ಹೆಚ್ಚಿನ ಜನಸಂಖ್ಯೆ ಭಾರತದಲ್ಲಿದೆ.

ಭಾರತದ ಜನಸಂಖ್ಯೆ ಮುಂಬರುವ ಮೂರು ದಶಕಗಳಲ್ಲಿ 165 ಕೋಟಿಗೆ ಏರಿಕೆಯಾಗಲಿದ್ದು, ಬಳಿಕ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯಲ್ಲಿ ಅಮೆರಿಕ ಮೂರನೇ ಸ್ಥಾನದಲ್ಲಿದ್ದು, 34 ಕೋಟಿಯಷ್ಟಿದೆ.

ಭಾರತದಲ್ಲಿ 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. 2021ರಲ್ಲಿ ಹೊಸ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ವಿಳಂಬವಾಗಿದೆ.

ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ 30 ವರ್ಷ ವಯೋಮಿತಿಗಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕೃಷಿ ವಲಯದಿಂದ ಅನೇಕ ಮಂದಿ ವಿಮುಖರಾಗುತ್ತಿದ್ದು, ಅವರಿಗೂ ಉದ್ಯೋಗಾವಕಾಶಗಳ ಸೃಷ್ಟಿ ಮುಖ್ಯವಾಗಿದೆ.

ಚೀನಾದಲ್ಲಿ ಜನಸಂಖ್ಯೆ ಇಳಿಯುತ್ತಿದೆ. ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ದುಡಿಯುವ ವರ್ಗದ ಜನಸಂಖ್ಯೆ ತಗ್ಗುತ್ತಿದೆ. ಇದು ಆರ್ಥಿಕ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸವಾಲಾಗಿ ಪರಿಣಮಿಸಿದೆ.

ಚೀನಾವು ಮಾವೋ ಕಾಲದ ಒಂದು ಕುಟುಂಬಕ್ಕೆ ಒಂದು ಮಗು ಸಾಕು ಎಂಬ ನೀತಿಯನ್ನು ಸಡಿಲಗೊಳಿಸಿ ಹಲವು ವರ್ಷಗಳಾಗಿವೆ. ಇತ್ತೀಚೆಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹೀಗಿದ್ದರೂ, ಚೀನಾದ ಜನಸಂಖೆ ಇಳಿಯುತ್ತಿದೆ.

error: Content is protected !!