ನವದೆಹಲಿ : ಭಾರತ ದೇಶವು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಭಾರತದ ಜನಸಂಖ್ಯೆ ಸುಮಾರು 113 ಕೋಟಿ ಆಗಿದ್ದು ವಿಶ್ವದ 2ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಎನಿಸಿಕೊಂಡಿದೆ. ಈ ನಡುವೆ ಇತ್ತೀಚಿಗೆ ಟ್ರಾಫಿಕ್ ಕ್ಯಾಲಿಟಿ ಇಂಡೆಕ್ಸ್ (ಟಿಕ್ಯೂಐ) ನೀಡಿದ ವರದಿಯಲ್ಲಿ ಭಾರತದ ಅತ್ಯಂತ ಜನದಟ್ಟಣೆಯ (Populous Cities) ನಗರಗಳು ಯಾವುದೆಂಬುದನ್ನು ಪಟ್ಟಿ ಮಾಡಲಾಗಿದೆ. ಅದರಲ್ಲಿ ಭಾರತದ ಅತ್ಯಂತ ಜನದಟ್ಟಣೆಯ ನಗರ ಬೆಂಗಳೂರು ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚು ಕಾಡುತ್ತಿರುವ ಹಿನ್ನೆಲೆಯಲ್ಲಿ ಅದು ಮತ್ತೊಮ್ಮೆ ಗಮನ ಸೆಳೆದಿದೆ ಎನ್ನಲಾಗಿದೆ.
ಟ್ರಾಫಿಕ್ ಕ್ಯಾಲಿಟಿ ಇಂಡೆಕ್ಸ್ (ಟಿಕ್ಯೂಐ) ನಗರಗಳಲ್ಲಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ವಿವರವಾದ ವರದಿಯನ್ನು ನೀಡಿದೆ. ಬೆಂಗಳೂರು ಅತ್ಯಂತ ಜನದಟ್ಟಣೆಯನ್ನು ಹೊಂದಿರುವ ಕಾರಣ ಟಿಕ್ಯೂಐ ವರದಿಯಲ್ಲಿ ಹೆಚ್ಚಿನ ಸ್ಕೋರ್ಗಳನ್ನು ಗಳಿಸಿದೆ. ಇದರ ಸ್ಕೋರ್ಗಳು 800 ರಿಂದ 1,000 ರ ನಡುವೆ ಇದೆ. ಅಲ್ಲದೇ ಬೆಂಗಳೂರಿನಲ್ಲಿ ಪ್ರಯಾಣಿಸಲು ಬೆಳಿಗ್ಗೆ 8 ಗಂಟೆ ಉತ್ತಮ ಸಮಯ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ, ಮುಂಬೈ 787 ಸ್ಕೋರ್ಗಳನ್ನು ಗಳಿಸುವ ಮೂಲಕ ಬೆಂಗಳೂರಿನ ನಂತರ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರ ಎನಿಸಿಕೊಂಡಿದೆ. ದೆಹಲಿ ಮತ್ತು ಹೈದರಾಬಾದ್ ಕ್ರಮವಾಗಿ 747 ಮತ್ತು 718 ಸ್ಕೋರ್ಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಉದ್ಯೋಗಿಗಳ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮೂವ್ ಇನ್ ಸಿಂಕ್ ಆಯೋಜಿಸಿದ್ದ ಮೊಬಿಲಿಟಿ ಸಿಂಪೋಸಿಯಂನಲ್ಲಿ ಈ ಸಂಶೋಧನೆಗಳನ್ನು ಪ್ರಸ್ತುತಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಅಪ್ಪನನ್ನು ಕೊಂದವನನ್ನು 22 ವರ್ಷದ ಬಳಿಕ ಅದೇ ರೀತಿ ಹತ್ಯೆ ಮಾಡಿದ ಮಗ
ಬೆಂಗಳೂರಿನ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್ ಜಂಕ್ಷನ್, ಜುಲೈನಲ್ಲಿ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್ ತೆರೆದ ನಂತರ ಟ್ರಾಫಿಕ್ ಜಾಮ್ನಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಟ್ರಾಫಿಕ್ ಪೊಲೀಸರ ಪ್ರಕಾರ, ಸಿಲ್ಕ್ ಬೋರ್ಡ್ನಲ್ಲಿ ಸಂಚಾರ ದಟ್ಟಣೆ ಕನಿಷ್ಠ 50 ಪ್ರತಿಶತದಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ಅಲ್ಲದೇ ನಗರದಾದ್ಯಂತ ವ್ಯಾಪಕ ಸಂಚಾರ ಉಲ್ಲಂಘನೆಗಳನ್ನು ನಿಭಾಯಿಸಲು ಬೆಂಗಳೂರು ಪೊಲೀಸರು ತಮ್ಮ ಎಐ ಚಾಲಿತ ಕಣ್ಗಾವಲು ಹೆಚ್ಚಿಸುತ್ತಿದ್ದಾರೆ. ನವೀಕರಿಸಿದ ವ್ಯವಸ್ಥೆಯು ಈಗ 13 ವಿವಿಧ ರೀತಿಯ ಅಪರಾಧಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ಮತ್ತು ಉಲ್ಲಂಘಿಸುವವರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸುತ್ತದೆ ಎಂಬುದಾಗಿ ತಿಳಿದುಬಂದಿದೆ.