Friday, 22nd November 2024

Post Mortem: ಮರಣೋತ್ತರ ಪರೀಕ್ಷೆಯನ್ನು ಯಾಕೆ ರಾತ್ರಿ ನಡೆಸುವುದಿಲ್ಲ ಗೊತ್ತೆ?

Post Mortem

ಮರಣೋತ್ತರ ಪರೀಕ್ಷೆಯನ್ನು (Post Mortem) ರಾತ್ರಿ ವೇಳೆ ನಡೆಸಲಾಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಯಾಕೆ ಎನ್ನುವುದು ಗೊತ್ತಿದೆಯೇ? ಕೋಲ್ಕತ್ತಾದ ಆರ್ ಜಿ ಕರ್ ( Kolkata’s RG Kar ) ಆಸ್ಪತ್ರೆಯಲ್ಲಿ ಕೊಲೆಗೀಡಾದ ವೈದ್ಯೆಯ ಮೃತದೇಹದ (dead body) ಮರಣೋತ್ತರ ಪರೀಕ್ಷೆಯನ್ನು ರಾತ್ರಿ ವೇಳೆ ಮಾಡಿರುವುದು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಮಾತ್ರವಲ್ಲದೆ ರಾತ್ರಿ ಮರಣೋತ್ತರ ಪರೀಕ್ಷೆಯನ್ನು ಯಾಕೆ ಮಾಡಬಾರದು ಎನ್ನುವ ಪ್ರಶ್ನೆ ಕೂಡ ಎಲ್ಲರ ಮನದಲ್ಲಿ ಉದ್ಭವಿಸುವಂತೆ ಮಾಡಿದೆ. ಪ್ರಕರಣದ ವಿಚಾರಣೆ ವೇಳೆ ಮರಣೋತ್ತರ ಪರೀಕ್ಷೆ ಮಂಡಳಿಯ ಸದಸ್ಯರೊಬ್ಬರು ಇದನ್ನು ಆಕ್ಷೇಪಿಸಿದ್ದು, ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ನಿಯಮ ಧಿಕ್ಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕೂಡ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆ ಎಂದರೇನು?

ಅಸ್ವಾಭಾವಿಕ ಸಾವಿನ ಸಂದರ್ಭದಲ್ಲಿ ಮರಣದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪ್ರಕ್ರಿಯೆಯು ಸಾವಿನ ನಿಜವಾದ ಕಾರಣವನ್ನು ತಿಳಿಸುತ್ತದೆ, ಸಾವಿನ ಸ್ವರೂಪ, ಗುರುತಿಸಲಾಗದ ದೇಹದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.

ಈ ಪ್ರಕ್ರಿಯೆಯಲ್ಲಿ ವೈದ್ಯರು ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸುತ್ತಾರೆ. ಇದು ದೀರ್ಘ ಮತ್ತು ಸಂಕೀರ್ಣ ಕಾರ್ಯವಿಧಾನವಾಗಿದೆ. ಆದರೆ ಸೂರ್ಯಾಸ್ತದ ಬಳಿಕ ಅಂದರೆ ರಾತ್ರಿಯಲ್ಲಿ ಯಾವುದೇ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ.

ರಾತ್ರಿ ಮರಣೋತ್ತರ ಪರೀಕ್ಷೆ ಏಕೆ ನಡೆಸುವುದಿಲ್ಲ?

ಮರಣೋತ್ತರ ಪರೀಕ್ಷೆಗಳನ್ನು ಯಾವಾಗಲೂ ಹಗಲು ನಡೆಸಲಾಗುತ್ತದೆ. ರಾತ್ರಿ ನಡೆಸಲಾಗುವುದಿಲ್ಲ. ವ್ಯಕ್ತಿಯ ಮರಣದ 4- 6 ಗಂಟೆಗಳ ಅನಂತರ ಮರಣ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಅವಧಿಯ ಅನಂತರವೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ವ್ಯಕ್ತಿಯ ಮರಣದ 4- 6 ಗಂಟೆಗಳ ಅನಂತರ ದೇಹದಲ್ಲಿ ಹಲವಾರು ರಾಸಾಯನಿಕ ಕ್ರಿಯೆಗಳು ಪ್ರಾರಂಭವಾಗುತ್ತವೆ. ಇದರಿಂದ ಸಾಕ್ಷ್ಯಗಳನ್ನು ಪಡೆಯುವುದು ಕಷ್ಟ. ಅಲ್ಲದೇ ದೇಹದ ಸ್ಥಿತಿಯು ಬದಲಾಗುತ್ತದೆ. ಮರಣೋತ್ತರ ಪರೀಕ್ಷೆಯಲ್ಲಿ ಕಡಿಮೆ ನಿಖರವಾದ ಫಲಿತಾಂಶಗಳಿಗೆ ಕಾರಣವಾಗುತ್ತದೆ.

ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸದಿರಲು ಮುಖ್ಯ ಕಾರಣ ನೈಸರ್ಗಿಕ ಬೆಳಕು ಇಲ್ಲದೇ ಇರುವುದು. ಹಗಲಿನ ಬೆಳಕಿನಲ್ಲಿ ದೇಹದ ಮೇಲಿನ ಎಲ್ಲಾ ಗಾಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಆದರೆ ರಾತ್ರಿಯ ಕೃತಕ ಬೆಳಕಿನಲ್ಲಿ ಈ ಗಾಯಗಳ ಸ್ವರೂಪ ಸ್ಪಷ್ಟವಾಗದೇ ಇರಬಹುದು ಅಥವಾ ನಿಖರವಾಗಿ ಗ್ರಹಿಸಲಾಗದು.

Lokayukta Raid: ಹಾಜರಾತಿ ನೀಡಲು ಲಂಚಕ್ಕೆ ಬೇಡಿಕೆ, ಲೋಕಾಯುಕ್ತ ಬಲೆಗೆ ಬಿದ್ದ ವಾರ್ಡನ್

ಅನೇಕ ಸಂದರ್ಭಗಳಲ್ಲಿ ರಾತ್ರಿಯ ಎಲ್ಇಡಿ ಅಥವಾ ಇತರ ಕೃತಕ ದೀಪಗಳ ಅಡಿಯಲ್ಲಿ ಗಾಯಗಳು ಅಸ್ಪಷ್ಟವಾಗಿ ಕಂಡುಬರುತ್ತವೆ. ಇದರಿಂದ ಗಾಯದ ನಿಖರವಾದ ಕಾರಣವನ್ನು ನಿರ್ಧರಿಸಲು ಕಷ್ಟವಾಗುತ್ತದೆ. ಪರಿಣಾಮವಾಗಿ ಸಾವಿಗೆ ನಿಜವಾದ ಕಾರಣದ ಬಗ್ಗೆ ಗೊಂದಲ ಉಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೇ ಮರಣೋತ್ತರ ಪರೀಕ್ಷೆಗಳಿಗೆ ಕೆಲವು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಹೀಗಾಗಿ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಒಲವು ತೋರಿಸುವುದಿಲ್ಲ.

ಆದರೆ ಈಗ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಇದೆ. ಹಾಗಾಗಿ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸಿದರೂ ಯಾವುದೇ ತೊಂದರೆ ಆಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.