Saturday, 23rd November 2024

ಲಸಿಕೆ ಅಭಿಯಾನಕ್ಕೆ ಒಂದು ವರ್ಷ: ಕೋವ್ಯಾಕ್ಸಿನ್’ನ ಪೋಸ್ಟೇಜ್ ಸ್ಟಾಂಪ್ ಬಿಡುಗಡೆ

ನವದೆಹಲಿ: ಭಾರತದ ವಯಸ್ಕರಲ್ಲಿ 93 ಪ್ರತಿಶತದಷ್ಟು ಜನರು ಮೊದಲ ಡೋಸ್ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಲಸಿಕೆ ಅಭಿಯಾನ ಆರಂಭವಾಗಿ ಒಂದು ವರ್ಷವಾಗಿದ್ದು, ಕೋವ್ಯಾಕ್ಸಿನ್ ನ ಪೋಸ್ಟೇಜ್ ಸ್ಟಾಂಪ್ ಬಿಡುಗಡೆ ಮಾಡುವ ಮೂಲಕ ಈ ಸಂಭ್ರಮವನ್ನ ಆಚರಿಸಲಾಗಿದೆ.

ಕಳೆದ ವರ್ಷ ಜ.16 ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ನೀಡುವುದರೊಂದಿಗೆ ಈ ಅಭಿಯಾನ ಪ್ರಾರಂಭಿಸಲಾಯಿತು. ವರ್ಚುವಲ್ ಕಾರ್ಯಕ್ರಮದಲ್ಲಿ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಂಡವಿಯಾ, ಇದು ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ದೇಶದ ಕೋವಿಡ್ ಲಸಿಕೆ ಅಭಿಯಾನದಿಂದ ಇಡೀ ಜಗತ್ತು ಆಶ್ಚರ್ಯಚಕಿತವಾಗಿದೆ ಎಂದು ಹೇಳಿದರು.

ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಐಸಿಎಂಆರ್ ಮತ್ತು ಭಾರತ್ ಬಯೋಟೆಕ್, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡಿದ್ದಾರೆ ಎಂದು ಅವರು ಹೇಳಿದರು‌.

ನಮ್ಮ ಪ್ರಧಾನ ಮಂತ್ರಿಗಳು ಸಂಶೋಧನೆ ನಡೆಸಲು ಮತ್ತು ಸ್ಥಳೀಯ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು ಮತ್ತು ಲಸಿಕೆ ತಯಾರಿಕಾ ಕಂಪನಿಗಳಲ್ಲಿ ಉತ್ಸಾಹ ತುಂಬಿದರು,‌ ಅವರಿಗೆ ಬೆಂಬಲ ನೀಡಿದರು. ಉತ್ತಮ ಲಸಿಕೆಗಳನ್ನ ತಯಾರಿಸುವವರನ್ನು ಗುರುತಿಸುವ ಗುರುತಿಸುವ ಸಾಮರ್ಥ್ಯ ಬೇಕಾಗಿತ್ತು ಅಷ್ಟೇ ಎಂದು ಮಾಂಡವೀಯ ಹೇಳಿದರು.