Thursday, 12th December 2024

ಗ್ಯಾಂಗ್‌ಸ್ಟರ್‌ಗಳದ್ದೇ ಅಂಚೆಚೀಟಿ: ಕಾನ್ಪುರದಲ್ಲಿ ಅಂಚೆ ಇಲಾಖೆ ಅನಾಹುತ

ಲಖನೌ: ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವುದು ವಾಡಿಕೆ.

ಆದರೆ ಉತ್ತರ ಪ್ರದೇಶದ ಅಂಚೆ ಇಲಾಖೆಯಿಂದ ಭಾರಿ ಅನಾಹುತ ಸಂಭವಿಸಿದೆ. ಸಂಸ್ಥೆಗಳು, ವ್ಯಕ್ತಿಗಳ ವಿಶೇಷ ಸಾಧನೆ ಗುರುತಿಸಿ ಸಾಂಕೇತಿಕವಾಗಿ ಅಂಚೆಚೀಟಿ ಪ್ರಕಟಿಸಲಾಗುತ್ತದೆ. ಆದರೆ ಉತ್ತರ ಪ್ರದೇಶದ ಸರ್ಕಾರ ಹೊರತಂದಿರುವ ಅಂಚೆಚೀಟಿಯಲ್ಲಿ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಚಿತ್ರವಿದೆ!

ಕಾನ್ಪುರದಲ್ಲಿ ಅಂಚೆ ಇಲಾಖೆ ಪ್ರಕಟಿಸಿದ ಐದು ರೂ.ನ ಅಂಚೆಚೀಟಿಯಲ್ಲಿ ಗ್ಯಾಂಗ್‌ಸ್ಟರ್‌ಗಳಾದ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಅವರ ಚಿತ್ರವಿದ್ದು, ಸರ್ಕಾರ ಪೇಚಿಗೆ ಸಿಲುಕಿದೆ. ಫೋಟೋ ಪ್ರಕಟಿಸಿರುವ ಅಂಚೆ ಇಲಾಖೆ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿದೆ.

ಈ ಗ್ಯಾಂಗ್​ಸ್ಟರ್​ಗಳ ಫೋಟೋ ಅಂಚೆ ಚೀಟಿಯಲ್ಲಿ ಬಂದದ್ದು ಹೇಗೆ ಎಂಬ ಕುರಿತು ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ನಡೆದ ತಪ್ಪುಗಳ ಬಗ್ಗೆ ಪೋಸ್ಟ್ ಮಾಸ್ಟರ್ ಜನರಲ್ ವಿ.ಕೆ.ವರ್ಮಾ ಒಪ್ಪಿಕೊಂಡಿದ್ದು, ‘ಇದು ಹೇಗೆ ಸಂಭವಿಸಿತು ಮತ್ತು ಗುಮಾಸ್ತರಿಗೆ ಪಾತಕಿಗಳನ್ನು ಗುರುತಿಸಲು ಯಾಕೆ ಸಾಧ್ಯವಾಗಲಿಲ್ಲ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಮೈ ಸ್ಟ್ಯಾಂಪ್ ಯೋಜನೆಯಡಿ ಬಿಡುಗಡೆ: ಅಂಚೆ ಇಲಾಖೆಯ ಮೈ ಸ್ಟ್ಯಾಂಪ್ ಎಂಬ ಯೋಜನೆಯಡಿ 300 ರೂ. ಪಾವತಿಸಿ ಸಾಧಕರ ಫೋಟೋ ನೀಡಿ ಸ್ಟ್ಯಾಂಪ್ ಪ್ರಕಟಿಸುವ ಯೋಜನೆ ಇದೆ. ಸಂಬಂಧಪಟ್ಟ ಕುಟುಂಬದವರು ವ್ಯಕ್ತಿಯ ಸೂಕ್ತ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ. ಆದರೆ ಕಿಡಿಗೇಡಿಗಳು ಛೋಟಾ ರಾಜನ್ ಹಾಗೂ ಮುನ್ನಾ ಭಜರಂಗಿ ಚಿತ್ರವನ್ನು ನೀಡಿದ್ದಾರೆ.

ಇವರಿಬ್ಬರೂ ತಮ್ಮ ಸಂಬಂಧಿಕರು ಎಂದು ಹೇಳಿ ಇವರ ಫೋಟೋ ನೀಡಿದ್ದಾರೆ. ಆದರೆ ಅಂಚೆ ಗುಮಾಸ್ತರು ಅದಕ್ಕೆ ಅತ್ಯಗತ್ಯ ವಾಗಿರುವ ಅವರ ಗುರುತಿನ ಪತ್ರಗಳನ್ನು ಕೇಳದೆ ತಲಾ 12 ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ!

ಭೂಗತ ಪಾತಕಿ ಛೋಟಾ ರಾಜನ್ ಪ್ರಸ್ತುತ ಮುಂಬೈ ಜೈಲಿನಲ್ಲಿದ್ದು, 20 ವರ್ಷಗಳಲ್ಲಿ ಕನಿಷ್ಠ 40 ಕೊಲೆ ಮಾಡಿರುವ ಆರೋಪ ಹೊತ್ತ ಮುನ್ನಾ ಭಜರಂಗಿಯನ್ನು ಜುಲೈ 9, 2018 ರಂದು ಪಶ್ಚಿಮ ಉತ್ತರಪ್ರದೇಶದ ಬಾಗ್ಪತ್ ಜೈಲಿನಲ್ಲಿ ಹತ್ಯೆ ಮಾಡಲಾಗಿತ್ತು.