ಗುವಾಹಟಿ: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ‘ಈಶಾನ್ಯ ರಾಜ್ಯಗಳ ಶೈಕ್ಷಣಿಕ ಸಮಾವೇಶದಲ್ಲಿ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ.ಅವರು ಪಾಲ್ಗೊಂಡು, ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಅನುಷ್ಠಾನಗೊಳಿಸಿದ ಕುರಿತು ವಿಡಿಯೋ ಪ್ರಾತ್ಯಕ್ಷಿಕೆ ಮಂಡಿಸಿದರು.
ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಹೊರಟಾಗ ಆರಂಭದಲ್ಲಿ ಎದುರಾದ ಪ್ರಶ್ನೆ ಗಳು, ಅನುಮಾನಗಳು, ಇನ್ನಿತರ ವಿಷಯಗಳನ್ನು ಅವರು ಹಂಚಿಕೊಂಡರು. ಈ ಸಮಾ ವೇಶದಲ್ಲಿ ಈಶಾನ್ಯ ರಾಜ್ಯಗಳ ಶಿಕ್ಷಣ ಸಚಿವರು ಭಾಗವಹಿಸಿದ್ದರು. ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ಕಾರಣಕ್ಕೆ ಅಸ್ಸಾಂ ಸರ್ಕಾರವೇ ರಾಜ್ಯದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರನ್ನು ಆಹ್ವಾನಿಸಿತ್ತು.
ಡಿಸಿಪ್ಲೀನ್ ಕೋರ್ ವಿಷಯಗಳು, ಓಪನ್ ಎಲೆಕ್ಟೀವ್ಸ್, ಮಲ್ಟಿ ಎಂಟ್ರಿ- ಮಲ್ಟಿ ಎಕ್ಸಿಟ್, ರಾಷ್ಟ್ರೀಯ ಕೌಶಲ್ಯ ಅರ್ಹತಾ ರೂಪು ರೇಷೆಗೆ ಅನ್ವಯಿಸಲಾದ ಪಠ್ಯಕ್ರಮ, ಅಧಿಕೃತ ಆನ್ ಲೈನ್ ಕೋರ್ಸ್ ಕುರಿತು ವಿವರಿಸಿದರು.
ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದಕ್ಖಾಗಿ ಕರ್ನಾಟಕದಲ್ಲಿ ಮಾಡಲಾಗಿ ರುವ ತಾಂತ್ರಿಕ ನೆರವುಗಳ ಕುರಿತು ಗಮನ ಸೆಳೆದ ಅವರು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ, ಸ್ಮಾರ್ಟ್ ಕ್ಲ್ಯಾಸ್ ರೂಮ್ ಗಳ ಸ್ಥಾಪನೆ, ಡಿಜಿಟಲ್ ಬೋಧನೆ-ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡಿರುವುದು, ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‌ಎಂಎಸ್), ಬೋಧನೆ-ಕಲಿಕೆ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಕೊಡಲಾಗಿರುವ ಒತ್ತು, ಆ ಮೂಲಕ ಕಲಿಕಾ ಸರಪಳಿಯ ಯಾವ ಕೊಂಡಿಯೂ ತಪ್ಪಿಹೋಗದಂತೆ ಹೇಗೆ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ತಿಳಿಸಿದರು.
ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣದಲ್ಲಿ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇರಿಸಿದ್ದು, ಇದಕ್ಕಾಗಿ ಅಮೆರಿಕದ ಪೆನ್ಸಿಲ್ವೇನಿ ಯಾದ ಮಾಂಟ್ಗೊಮೇರಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈಗ ಸೈಬರ್ ಸೆಕ್ಯುರಿಟಿ ಮತ್ತು ಟ್ರಾವೆಲ್ & ಟೂರಿಸಂ ಕೋರ್ಸ್ ಗಳಲ್ಲಿ 48 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಪ್ರತಿ ವಿದ್ಯಾರ್ಥಿಗೆ ತಗುಲುವ 20 ಲಕ್ಷ ರೂಪಾ ಯಿಗೂ ಹೆಚ್ಚಿನ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ವಿವಿಧ ರಾಜ್ಯಗಳು ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಹಿತಾಸಕ್ತಿದಾರರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.