Thursday, 12th December 2024

‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ

ಮುಂಬೈ: ಮುಂಬೈನ ವಿವಾದಿತ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಪ್ರದೀಪ್ ಶರ್ಮಾಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎನ್‌ಕೌಂಟರ್ ಸ್ಪೆಷಲಿಸ್ಟ್ ಒಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದಂತಾಗಿದೆ.

2006ರಲ್ಲಿ ಮುಂಬೈನಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ನ ಆಪ್ತ ಸಹಾಯಕ ರಾಮನಾರಾಯಣ ಗುಪ್ತಾ ಅವರ ನಕಲಿ ಎನ್‌ಕೌಂಟರ್ ಸಾವಿನ ಪ್ರಕರಣದಲ್ಲಿ ನ್ಯಾಯಾಲಯವು ಪ್ರದೀಪ್ ಶರ್ಮಾ ಅವರನ್ನು ದೋಷಿ ಎಂದು ಘೋಷಿಸಿತ್ತು, ಆದರೆ ಇತರ 13 ಆರೋಪಿಗಳ ಶಿಕ್ಷೆಯನ್ನು ನ್ಯಾಯಾ ಲಯ ಎತ್ತಿಹಿಡಿದಿತ್ತು.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ಪೀಠ, ‘ಪೊಲೀಸರು ಗುಪ್ತಾ ಅವರನ್ನು ಕೊಂದಿದ್ದಾರೆ ಎಂದು ಪ್ರಾಸಿಕ್ಯೂ ಷನ್ ಸಾಬೀತುಪಡಿಸಿದೆ ಮತ್ತು ಅದನ್ನು ನಿಜವಾದ ಎನ್‌ಕೌಂಟರ್‌ನಂತೆ ಬಿಂಬಿಸಿದೆ’ ಎಂದು ಹೇಳಿದೆ. ಪ್ರಕರಣದಲ್ಲಿ 12 ಮಾಜಿ ಪೊಲೀಸರು ಮತ್ತು ನಾಗರಿಕ ಸೇರಿದಂತೆ 13 ಇತರ ಆರೋಪಿಗಳ ಅಪರಾಧ ಮತ್ತು ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

‘ಕಾನೂನಿನ ರಕ್ಷಕರು ಸಮವಸ್ತ್ರದಲ್ಲಿ ಅಪರಾಧಿಗಳಂತೆ ವರ್ತಿಸಲು ಅನುಮತಿಸಲಾಗುವುದಿಲ್ಲ ಮತ್ತು ಇದಕ್ಕೆ ಅವಕಾಶ ನೀಡಿದರೆ ಅದು ಅರಾಜಕತೆಗೆ ಕಾರಣವಾಗುತ್ತದೆ’ ಎಂದು ಹೇಳಿದೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶರ್ಮಾ ಅವರನ್ನು ಖುಲಾಸೆಗೊಳಿಸಿದ 2013ರ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪೀಠವು ತಳ್ಳಿಹಾಕಿತು.

ಪ್ರದೀಪ್ ಶರ್ಮಾ 1983 ರ ಬ್ಯಾಚ್ ಪೊಲೀಸ್ ಅಧಿಕಾರಿ. ಮುಂಬೈ ಭೂಗತ ಜಗತ್ತಿನ ವಿರುದ್ಧದ ಅಭಿಯಾನಕ್ಕೆ ಅವರು ಹೆಸರುವಾಸಿಯಾಗಿದ್ದರು.