Friday, 22nd November 2024

ಹಿಮಾಚಲ ಪ್ರದೇಶ ಬಿಜೆಪಿ ಉಪಾಧ್ಯಕ್ಷ ಪ್ರವೀಣ್ ಶರ್ಮಾ ನಿಧನ

ಹಮೀರ್‌ಪುರ: ಹಿಮಾಚಲ ಪ್ರದೇಶ ಬಿಜೆಪಿ ಉಪಾಧ್ಯಕ್ಷ ಪ್ರವೀಣ್ ಶರ್ಮಾ( 65 ವರ್ಷ) ಗುರುವಾರ ಉನಾ ಜಿಲ್ಲೆಯಲ್ಲಿ ನಿಧನ ರಾಗಿದ್ದಾರೆ.

ಹಿಮಾಚಲ ಪ್ರದೇಶ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ರಾಗಿದ್ದ ಶರ್ಮಾ ಅವರು, ಉನಾ ಜಿಲ್ಲೆಯ ಪೋಲಿಯನ್ ಪುರೋಹಿತನ್ ಗ್ರಾಮದ ತಮ್ಮ ಅಂಬ್ ಕಸ್ವಾ ನಿವಾಸದಲ್ಲಿ ನಿಧನರಾಗಿದ್ದಾರೆ.

ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಮತ್ತು ಹಿಮಾಚಲ ಪ್ರದೇಶದ ಮುಖ್ಯ ಮಂತ್ರಿ ಜೈರಾಮ್ ಠಾಕೂರ್ ಶರ್ಮಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ದ್ದಾರೆ.

ಶರ್ಮಾ ಅವರು 2003 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ರಾಜ್ಯದಲ್ಲಿ ಪಿ.ಕೆ. ಧುಮಾಲ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಮತ್ತು ತೆರಿಗೆ, ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವರಾಗಿದ್ದರು. ಅಲ್ಲದೆ, 1998 ರಿಂದ 2003 ರವರೆಗೆ ಸಚಿವರಾಗಿದ್ದರು.

ತಮ್ಮ ಕಾಲೇಜು ದಿನಗಳಲ್ಲಿ ಕಾಂಗ್ರಾ ಜಿಲ್ಲೆಯಲ್ಲಿ ಎಬಿವಿಪಿ ಚಳವಳಿಯ ಮುಂಚೂಣಿಯಲ್ಲಿದ್ದ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದರು. ರಾಜ್ಯದ ಇತರ ಹಿರಿಯ ಬಿಜೆಪಿ ನಾಯಕರೊಂದಿಗೆ 18 ತಿಂಗಳ ಕಾಲ ಜೈಲಿನಲ್ಲಿದ್ದರು.

1998 ರಲ್ಲಿ ಹಿಮಾಚಲ ಪ್ರದೇಶದ ಪಕ್ಷದ ವ್ಯವಹಾರಗಳ ಮುಖ್ಯಸ್ಥರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶರ್ಮಾ ನಿಕಟ ಸಂಪರ್ಕವನ್ನು ಹೊಂದಿದ್ದರು ಮತ್ತು ಅವರ ರಾಜ್ಯ ಪ್ರವಾಸದ ಸಮಯದಲ್ಲಿ ಅವರನ್ನು ತಮ್ಮ ಸ್ಕೂಟರ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಗೆ ಕರೆದೊಯ್ಯುತ್ತಿದ್ದರು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಠಾಕೂರ್, ‘ಬಡವರ ಪರವಾಗಿ ಉತ್ತಮ ಉದ್ದೇಶಕ್ಕಾಗಿ ಸದಾ ಹೋರಾಡುತ್ತಿದ್ದ ತನ್ನ ಬಲಿಷ್ಠ ನಾಯಕರೊಬ್ಬರನ್ನು ಪಕ್ಷ ಕಳೆದುಕೊಂಡಿದೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಧುಮಾಲ್ ಅವರು, ‘ಶರ್ಮಾ ಅವರ ನಿಧನವು ನನಗೆ ವೈಯಕ್ತಿಕ ನಷ್ಟವಾಗಿದೆ ಮತ್ತು ‘ನಾನು ನನ್ನ ಆತ್ಮವನ್ನು ಕಳೆದುಕೊಂಡಿರುಂತೆ ಭಾಸವಾಗುತ್ತಿದೆ. ಪಕ್ಷ ಸಂಘಟನೆ ಹಾಗೂ ಜನರಿಗಾಗಿ ದುಡಿದ ಪ್ರವೀಣ್ ಶರ್ಮಾ ಅವರನ್ನು ಇಡೀ ರಾಜ್ಯ ಸ್ಮರಿಸುತ್ತದೆ’ ಎಂದಿದ್ದಾರೆ.