Saturday, 14th December 2024

ಅಫ್ಘಾನಿಸ್ತಾನದಿಂದ ಭಾರತೀಯರ ಸ್ಥಳಾಂತರಕ್ಕೆ ಮೊದಲ ಆದ್ಯತೆ: ಸಚಿವ ಎಸ್.ಜೈಶಂಕರ್

ನವದೆಹಲಿ: ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವುದು ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ವಿವಿಧ ರಾಜಕೀಯ ಪಕ್ಷಗಳ ಸಂಸದೀಯ ನಾಯಕರಿಗೆ ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಫ್ಘಾನಿಸ್ತಾನದಿಂದ ಸಾಧ್ಯವಾದಷ್ಟು ಜನರನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ದೋಹಾ ಒಪ್ಪಂದದ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ತಾಲಿಬಾನ್ ಉಲ್ಲಂಘಿಸಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಅಮೆರಿಕ ಮತ್ತು ತಾಲಿಬಾನ್ ಮುಖಂಡರ ನಡುವಣ ನಡೆದ ದೋಹಾ ಶಾಂತಿ ಒಪ್ಪಂದದಲ್ಲಿ ಕಾಬೂಲ್ ಸರ್ಕಾರ ಅಫ್ಘಾನಿ ಸ್ತಾನದ ಎಲ್ಲಾ ವರ್ಗದ ಜನರನ್ನು ಪ್ರತಿನಿಧಿಸುವುದು, ಧಾರ್ಮಿಕ ಸ್ವಾತಂತ್ರ ಹಾಗೂ ಪ್ರಜಾಪ್ರಭುತ್ವಕ್ಕೆ ಅವಕಾಶ ಕಲ್ಪಿಸುವುದು ಸೇರಿದಂತೆ ಮತ್ತಿತರ ಅನೇಕ ಭರವಸೆಗಳನ್ನು ನೀಡಲಾಗಿತ್ತು.