Thursday, 12th December 2024

Pregnancy Tips: ಗರ್ಭಪಾತಕ್ಕೆ ಏನು‌ ಕಾರಣ? ಇದನ್ನು ತಡೆಯುವುದು ಹೇಗೆ?

Pregnancy Tips

ತಾಯಿಯಾಗುವುದು(Pregnancy Tips) ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಆದರೆ ಎಲ್ಲಾ ಮಹಿಳೆಯರಿಗೂ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಹಾಗೇ ಕೆಲವೊಮ್ಮೆ ಗರ್ಭ ಧರಿಸಿದ ಮಹಿಳೆಯರಿಗೂ ಕೂಡ ಗರ್ಭಪಾತವಾಗಿ ತಾಯಿಯಾಗುವ ಕನಸು ನುಚ್ಚು ನೂರಾಗುತ್ತದೆ.  ಅನೇಕ ಮಹಿಳೆಯರಲ್ಲಿ ಗರ್ಭಪಾತದ ಸಮಸ್ಯೆ ಕಾಡುತ್ತಿರುತ್ತದೆ. ಹಾಗಾದ್ರೆ ಈ ಗರ್ಭಪಾತಕ್ಕೆ ಕಾರಣವೇನು, ಅದರ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಿ.

Pregnancy Tips

ಗರ್ಭಪಾತ ಎಂದರೇನು?
ಗರ್ಭಪಾತ ಎನ್ನುವುದು ಮಹಿಳೆಯರನ್ನು ಕಾಡುವಂತಹ ಒಂದು ನೋವಿನ ಸಂಗತಿಯಾಗಿದೆ. ಇದರಿಂದ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ನೋವನ್ನು ಅನುಭವಿಸುತ್ತಾರೆ.  ಗರ್ಭಧಾರಣೆಯಾಗಿ 20 ವಾರಗಳ ಮೊದಲು ಮಗು ಸತ್ತರೆ ಅದನ್ನು ಗರ್ಭಪಾತ ಎನ್ನುತ್ತಾರೆ. ಭ್ರೂಣವು ಸರಿಯಾದ ಸ್ಥಳದಲ್ಲಿ ಇಲ್ಲದೇ ಇದ್ದಾಗ ಹಾಗೂ ಸರಿಯಾಗಿ ಬೆಳವಣಿಗೆ ಹೊಂದದೇ ಇದ್ದಾಗ ಕೆಲವೊಮ್ಮೆ ಗರ್ಭಪಾತವಾಗುತ್ತದೆ. ಹೊಟ್ಟೆಯಲ್ಲಿ ಭ್ರೂಣವು ಸ್ಥಿರವಾಗಿ ನಿಲ್ಲಲು 20 ವಾರಗಳು ಬೇಕಾಗುತ್ತದೆ.

ಗರ್ಭಪಾತದ ಲಕ್ಷಣಗಳು
*ಗರ್ಭಪಾತದ ಸಾಮಾನ್ಯ ಲಕ್ಷಣವೆಂದರೆ ಯೋನಿಯಲ್ಲಿ ರಕ್ತಸ್ರಾವವಾಗುವುದು,  ಇದು ತಿಳಿ ಕೆಂಪು ಅಥವಾ ಕಂದು ಬಣ್ಣದ ಕಲೆಗಳಿಂದ ಹಿಡಿದು ಭಾರಿ ರಕ್ತಸ್ರಾವದವರೆಗೆ ಕಂಡುಬರಬಹುದು. ಇದು ಗರ್ಭಧಾರಣೆಯ ಆರಂಭದಲ್ಲಿದ್ದರೆ ಅಥವಾ ನೀವು ಗರ್ಭಿಣಿಯಾಗಿದ್ದೀರಿ ಎಂದು ತಿಳಿಯದ ವೇಳೆ ಸಂಭವಿಸುತ್ತದೆ.

*ಇತರ ಲಕ್ಷಣಗಳೆಂದರೆ ಕಿಬ್ಬೊಟ್ಟೆಯಲ್ಲಿ ಸೆಳೆತ, ನೋವು, ಅಥವಾ ತೀವ್ರವಾದ ಹೊಟ್ಟೆನೋವು, ಯೋನಿಯಿಂದ ದ್ರವ ಹೊರಗೆ ಬಂದರೆ, ಯೋನಿಯಿಂದ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಅಂಗಾಂಶವು ಹೊರಗೆಬಂದರೆ ಆಗ ಗರ್ಭಪಾತವಾಗಿದೆ ಎಂದು ತಿಳಿಯಿರಿ.

Pregnancy Tips

ಗರ್ಭಪಾತಕ್ಕೆ ಕಾರಣಗಳ
*ಅನುವಂಶಿಕ ಅಸಹಜತೆ ಅಂದರೆ ವೀರ್ಯಾಣ ಮತ್ತು ಅಂಡಾಣು ಸಮ್ಮಿಲನದಿಂದ ಕ್ರೋಮೋಸೋಮ್‍ಗಳು ಸರಿಯಾಗಿ ರೂಪುಗೊಳ್ಳದಿದ್ದರೆ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆಯಾಗಿ ಗರ್ಭಪಾತವಾಗುತ್ತದೆ.

*ಹಾರ್ಮೋನುಗಳ ಸಮಸ್ಯೆಗಳಿಂದ ಅಂದರೆ ಸಾಕಷ್ಟು ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪತ್ತಿಯಾಗದಿದ್ದಾಗ ಗರ್ಭದಲ್ಲಿ ಭ್ರೂಣದ ಬೆಳವಣಿಗೆಗೆ ಸಮಸ್ಯೆಯಾಗಿ ಗರ್ಭಪಾತವಾಗುತ್ತದೆ.

*ಗರ್ಭಾಶಯದಲ್ಲಿ ಸಮಸ್ಯೆಗಳು ಅಂದರೆ ರಕ್ತಹೆಪ್ಪುಗಟ್ಟುವುದು, ಫೈಬ್ರಾಯ್ಡಿಗಳಿಂದ ಮಗುವಿಗೆ ಸರಿಯಾಗಿ ರಕ್ತ ಪೂರೈಕೆಯಾಗದಿದ್ದಾಗ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆಯಾಗಿ ಗರ್ಭಪಾತವಾಗುತ್ತದೆ.

* ಥೈರಾಯ್ಡ್ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ಹೈಬಿಪಿ, ಕಿಡ್ನಿ ಸಮಸ್ಯೆ ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಗರ್ಭಪಾತವಾಗುವ ಸಂಭವವಿದೆ.

*ಗರ್ಭಧಾರಣೆಯ ಸಮಯದಲ್ಲಿ ತೀವ್ರ ಜ್ವರ, ದೇಹದ ಉಷ್ಣತೆ ಹೆಚ್ಚಾದರೆ, ಹಾಗೂ ಒತ್ತಡದಿಂದ ಕೆಲವೊಮ್ಮೆ  ಗರ್ಭಪಾತವಾಗುವ ಸಾಧ್ಯತೆ ಇದೆ.

* ಮಹಿಳೆಯ ವಯಸ್ಸು ಹೆಚ್ಚಾಗಿದ್ದರೆ, ಆಲ್ಕೋಹಾಲ್ ಕುಡಿಯುವವರಿಗೆ, ಕಾಫಿ, ಚಹಾ ಅಥವಾ ಎನರ್ಜಿ ಡ್ರಿಂಕ್‍ಗಳಂತಹ ಸಾಕಷ್ಟು ಕೆಫೀನ್ ಅಂಶವಿರುವ ಪಾನೀಯ ಕುಡಿದರೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ನಿಮ್ಮ ಹಿತ್ತಲಲ್ಲಿ ಇರುವ ಈ ಹೂವು ಮಧುಮೇಹ ಸಮಸ್ಯೆಗೆ ರಾಮಬಾಣ!

ಗರ್ಭಪಾತವನ್ನು ತಡೆಗಟ್ಟಲು ಈ ಸಲಹೆ ಪಾಲಿಸಿ:
ಗರ್ಭಧಾರಣೆಯು ಅಸಹಜವಾಗಿದ್ದರೆ ಗರ್ಭಪಾತ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಆರೋಗ್ಯವಾದ ಗರ್ಭದಾರಣೆಯನ್ನು ಉಳಿಸಿಕೊಳ್ಳಲು ಉತ್ತಮ ಆಹಾರವನ್ನು ಸೇವಿಸಿ, ಕೆಫೀನ್, ಆಲ್ಕೋಹಾಲ್‍ ಕುಡಿಯುವುದನ್ನು ತಪ್ಪಿಸಿ. ಸಾಂಕ್ರಾಮಿಕ ರೋಗಗಳು ಬರದಂತೆ ನೋಡಿಕೊಳ್ಳಿ. ಸೋಂಕಿತ ಜನರ ಸಂಪರ್ಕ ಮಾಡಬೇಡಿ. ಸಾಕಷ್ಯ ಎಚ್ಚರ ವಹಿಸಿದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು.